ದಾವಣಗೆರೆ :ಕೆಲವರು ದೇಶದ ನೆಮ್ಮದಿ ಭಂಗವನ್ನುಂಟು ಮಾಡಲು ಧರ್ಮ-ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತವರಿಂದ ಯುವ ಜನತೆ ದೂರ ಉಳಿಯಿರಿ. ತಮ್ಮ ಬದುಕು, ಭವಿಷ್ಯ ಕಾಪಾಡಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಸಲಹೆ ನೀಡಿದರು.
ಇಂದು ದಾವಣಗೆರೆ ಜಿಲ್ಲಾಡಳಿತ ಆಯೋಜಿಸಿದ್ದ ರಾಜ್ಯ ಮಟ್ಟದ ಯುವ ಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು. ಯುವ ಜನತೆ ಸಮಾಜಮುಖಿಯಾಗಿ ಬೆಳೆದಾಗ ದೇಶದ ಆಸ್ತಿ ಆಗುತ್ತಾರೆ. ಇದಕ್ಕಾಗಿ ವೈಜ್ಞಾನಿಕ, ವೈಚಾರಿಕ ಶಿಕ್ಷಣ ಪಡೆದು ಸಮಾನ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಸಮಾಜದ ಪ್ರಗತಿಗೆ ಕಾರಣರಾಗಬೇಕು ಎಂದರು.
ಸಿಎಂ ಸಿದ್ದರಾಮಯ್ಯ ಮಾತನಾಡಿದರು (ETV Bharat) ನಾವು ದೇಶಕ್ಕೆ ಹೊರೆಯಾಗದೆ, ದೇಶಕ್ಕೆ ಸಂಪತ್ತಾಗಿ ಬೆಳೆಯಬೇಕು ಎನ್ನುವ ಸಂಕಲ್ಪದೊಂದಿಗೆ ಯುವ ಜನತೆ ಸಜ್ಜಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಿಎಂ ಕರೆ ನೀಡಿದರು.
ಸಂವಿಧಾನದ ಸಾರ ಪ್ರತಿಯೊಬ್ಬರಿಗೂ ಅರ್ಥ ಆಗಬೇಕು. ಪ್ರತೀ ಪ್ರಜೆಗೂ ಅರ್ಥಿಕ, ಸಾಮಾಜಿಕ, ರಾಜಕೀಯ ಸ್ವಾತಂತ್ರ್ಯ ದೊರೆಯಬೇಕು. ಪ್ರತಿಯೊಬ್ಬರಿಗೂ ಅವರವರ ಧರ್ಮ ನಂಬಿಕೆಯ ಆಚರಣೆಗೆ ಅವಕಾಶ ಇರಬೇಕು ಎನ್ನುವುದೇ ಸಂವಿಧಾನದ ಸಾರ. ಈ ಸಂವಿಧಾನ ಇದ್ದುದರಿಂದಲೇ ನಾನು ಮುಖ್ಯಮಂತ್ರಿ ಆಗಲು ಸಾಧ್ಯವಾಯಿತು. ಆದ್ದರಿಂದ ಈ ಸಂವಿಧಾನವನ್ನು ಕಾಪಾಡುವುದೇ ನಮ್ಮ ಜವಾಬ್ದಾರಿ ಎಂದು ಹೇಳಿದರು.
ದೇಶ ನಮಗೇನು ಕೊಟ್ಟಿತು ಎನ್ನುವುದಕ್ಕಿಂತ ದೇಶಕ್ಕೆ ನಾವೇನು ಕೊಟ್ಟೆವು ಎನ್ನುವುದೇ ನಮಗೆ ಮುಖ್ಯವಾಗಬೇಕು. ಅನೇಕ ದುಷ್ಟ ಶಕ್ತಿಗಳು ದೇಶದ ನೆಮ್ಮದಿ ಕೆಡಿಸಲು, ಪ್ರಗತಿ ಹಾಳು ಮಾಡಲು ಕೆಲವರು ಧರ್ಮ-ಜಾತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ವಿಕೃತರಿಂದ ಯುವ ಜನತೆ ದೂರ ಉಳಿದು ಮನುಷತ್ವ ಬೆಳೆಸಿಕೊಂಡು, ಸಮಾಜಮುಖಿಯಾಗಿ ಬೆಳೆಯಬೇಕು. ಇದರಿಂದ ಪ್ರಜಾಪ್ರಭುತ್ವ ಉಳಿಸಿ, ಬೆಳೆಸಲು ಸಾಧ್ಯ ಎಂದು ಹೇಳಿದರು.
ಒಂದು ಲಕ್ಷದ 62 ಸಾವಿರ ಮಂದಿ ಯುವ ಜನತೆಯ ಖಾತೆಗೆ ಯುವನಿಧಿ ಹಣ ವರ್ಗಾವಣೆ ಮಾಡಿ, ಇವರಿಗೆ ಸ್ಕಿಲ್ ತರಬೇತಿಯನ್ನೂ ನೀಡುತ್ತಿದ್ದೇವೆ. ಇದಕ್ಕಾಗಿ 213 ಕೋಟಿ ಹಣ ಕೊಟ್ಟಿದ್ದೇವೆ. ವಿದ್ಯಾವಂತ ನಿರುದ್ಯೋಗಿ ಪದವೀಧರರ ನೆರವಿಗೆ ಸರ್ಕಾರ ಗಟ್ಟಿಯಾಗಿ ನಿಲ್ಲಬೇಕು ಎನ್ನುವ ಸಂಕಲ್ಪದಿಂದ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.
ರಾಜ್ಯದ ಸಮೃದ್ಧಿ-ಶಾಂತಿಗಾಗಿ ಹಾರೈಸಿದ ಸಿಎಂ ಸಿದ್ದರಾಮಯ್ಯ :ಹೊಸ ವರ್ಷಕ್ಕೆ ಶುಭಾಶಯ ಕೋರುವ ಮೂಲಕ ಮಾತು ಆರಂಭಿಸಿದ ಸಿಎಂ, ರಾಜ್ಯದ ಸಮೃದ್ಧಿ-ಶಾಂತಿಗಾಗಿ ಹಾರೈಸಿದರು. ಯುವ ಜನತೆ ಸಂಭ್ರಮದಿಂದ ಹೊಸ ವರ್ಷ ಬರ ಮಾಡಿಕೊಂಡು ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಿ ಎಂದು ಹೇಳಿದರು.
ದಾವಣಗೆರೆಯಲ್ಲಿ ಸಂಭ್ರಮದ ಯುವಜನೋತ್ಸವ : ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲಾಡಳಿತದ ವತಿಯಿಂದ ನಗರದ ಎಂಬಿಎ ಗ್ರೌಂಡ್ ಅಲ್ಲಿ ಹಮ್ಮಿಕೊಳ್ಳಲಾಗಿದೆ. ಎರಡು ದಿನಗಳ ಕಾಲ ಜರುಗುವ ಉತ್ಸವದಲ್ಲಿ ಸಾವಿರಾರು ಯುವಕ- ಯುವತಿಯರು ಭಾಗಿಯಾಗಲಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ಅವರು ಯುವಜನೋತ್ಸ ಉದ್ಘಾಟಿಸಿದರು. ಯುವಜನೋತ್ಸವ ಅಂಗವಾಗಿ ಇಂದು ಜಾನಪದ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಜಾಥಕ್ಕೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು.
ನಾಸಿಕ್ ಡೋಲ್ ಸದ್ದಿಗೆ ಕುಣಿದು ಕುಪ್ಪಳಿಸಿದ ಯುವ ಮನಸ್ಸುಗಳು (ETV Bharat) ಕರ್ನಲ್ ರವೀಂದ್ರನಾಥ್ ವೃತ್ತದಿಂದ ಆರಂಭವಾದ ಜಾಥದಲ್ಲಿ ಜಾನಪದ ಕಲಾತಂಡಗಳ ನೃತ್ಯ ಮೆರಗು ಮೂಡಿಸಿತ್ತು. ನೂರಾರು ಜನ ಯುವ ಮನಸ್ಸುಗಳು ರಸ್ತೆ ತುಂಬೆಲ್ಲಾ ನಾಸಿಕ್ ಡೋಲ್ ಸದ್ದಿಗೆ ಕುಣಿದು ಕುಪ್ಪಳಿಸಿದರು. ಯಕ್ಷಗಾನ, ನೃತ್ಯ ವೇಷ, ಲಂಬಾಣಿ ಸಮುದಾಯದ ಉಡುಗೆ ಧರಿಸಿದ್ದವರು ಎತ್ತಿನ ಗಾಡಿ ಮೇಲೆ ಕುಣಿದು ಜನರನ್ನು ಆಕರ್ಷಿಸಿಸಿದರು. ಅಲ್ಲದೆ ವಿದ್ಯಾರ್ಥಿಗಳ ಮಧ್ಯೆ ಶಿಕ್ಷಕಿಯೊಬ್ಬರು ಕುಣಿಯುತ್ತಿದ್ದದ್ದು ವಿಶೇಷವಾಗಿತ್ತು.
ಈ ವೇಳೆ ಶಾಸಕರಾದ ಬಿಪಿ ಹರೀಶ್, ಮೇಯರ್ ಚಮನ್ ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ್, ಜಿಲ್ಲಾ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್, ಡಿಸಿ ಗಂಗಾಧರ ಸ್ವಾಮಿ, ಜಿ.ಎಂ ಸಿಇಓ ಡಾ. ಸುರೇಶ್ ಬಿ. ಇಟ್ನಾಳ್ ಹಾಗೂ ಇನ್ನಿತರೆ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ :ಶೇ.60 ಕಮಿಷನ್ ಆರೋಪಕ್ಕೆ ಹೆಚ್ಡಿಕೆ ದಾಖಲೆ ಕೊಡಲಿ, ಎಲ್ಲ ಸರ್ಕಾರಗಳ ಕಾಲದಲ್ಲೂ ಬಸ್ ದರ ಜಾಸ್ತಿ ಆಗಿದೆ: ಸಿಎಂ - CM SIDDARAMAIAH