ಶಿವಮೊಗ್ಗ: ತರಬೇತಿ ನೀಡುವ ವೇಳೆ ಪ್ಯಾರಚೂಟ್ ತೆರೆಯದೆ ಸಾವನ್ನಪ್ಪಿದ್ದ ಕರ್ತವ್ಯನಿರತ ವಾಯುಸೇನೆಯ ಅಧಿಕಾರಿ ಮಂಜುನಾಥ್ (36) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಭಾನುವಾರ ಹುಟ್ಟೂರು ಸಂಕೂರು ಗ್ರಾಮದಲ್ಲಿ ನಡೆಯಿತು.
ಹೊಸನಗರ ತಾಲೂಕು ಸಂಕೂರು ಗ್ರಾಮದ ಮಂಜುನಾಥ್ ಅವರು ಕಳೆದ 16 ವರ್ಷಗಳಿಂದ ಭಾರತೀಯ ವಾಯುಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಆಗ್ರಾದ ವಾಯುಸೇನಾ ನೆಲೆಯಲ್ಲಿ ಯುದ್ಧ ವಿಮಾನದಿಂದ ಜಂಪ್ ಮಾಡುವ ತರಬೇತಿ ನೀಡುವಾಗ ಮಂಜುನಾಥ್ ಅವರ ಪ್ಯಾರಚೂಟ್ ಸಮಯಕ್ಕೆ ತೆರೆಯದೆ ಸುಮಾರು 1500 ಅಡಿಯಿಂದ ಬಿದ್ದು ಸಾವನ್ನಪ್ಪಿದ್ದರು.
ಇಂದು ಬೆಳಗ್ಗೆ ಶಿವಮೊಗ್ಗಕ್ಕೆ ಮಂಜುನಾಥ್ ಅವರ ಮೃತದೇಹ ಆಗಮಿಸಿದ್ದು, ಬೆಂಗಳೂರು ವಾಯುನೆಲೆಯ ಅಧಿಕಾರಿಗಳು ಅವರ ಶವವನ್ನು ತಂದರು. ಈ ವೇಳೆ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಎಸ್. ಎನ್. ಚನ್ನಬಸಪ್ಪ ಸೇರಿದಂತೆ ಬಿಜೆಪಿಯ ಮುಖಂಡರು ಗೌರವ ನಮನ ಸಲ್ಲಿಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಿಲ್ಲಾಧಿಕಾರಿ ಹಾಗೂ ಇತರೆ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ನಂತರ ಸೈನಿಕ ಅಧಿಕಾರಿಗಳು ಪಾರ್ಥಿವ ಶರೀರವನ್ನು ಸಂಕೂರಿಗೆ ತೆಗೆದುಕೊಂಡು ಹೋದರು. ಹೊಸನಗರದಲ್ಲಿ ಶಾಲಾ ಮಕ್ಕಳು ಸೇರಿದಂತೆ ನಾಗರಿಕರು ತಮ್ಮ ತಾಲೂಕಿನ ಯೋಧ ಮಂಜುನಾಥ್ ಅವರಿಗೆ ಅಶ್ರು ನಮನ ಸಲ್ಲಿಸಿದರು.