ಹುಬ್ಬಳ್ಳಿ:ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ರಾಮೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ. 200ಕ್ಕೂ ಹೆಚ್ಚು ದೇವಸ್ಥಾನ, ಧಾರ್ಮಿಕ ಕೇಂದ್ರಗಳಲ್ಲಿ ಶ್ರೀರಾಮ ಹಾಗೂ ಹನುಮಂತನಿಗೆ ವಿಶೇಷ ಪೂಜೆ, ಹೋಮ ಹಾಗೂ ಹವನಗಳನ್ನು ಹಮ್ಮಿಕೊಳ್ಳಲಾಗಿದೆ.
ಅಯೋಧ್ಯೆಯಲ್ಲಿ ನಡೆಯುವ ಭವ್ಯ ಸಮಾರಂಭವನ್ನು ವೀಕ್ಷಿಸಲು ವಿವಿಧ ಸಂಘ, ಸಂಸ್ಥೆಗಳು 100ಕ್ಕೂ ಹೆಚ್ಚು ಕಡೆ ಎಲ್‌ಇಡಿ ಪರದೆ ಅಳವಡಿಸಿವೆ. ದೇಗುಲಗಳಲ್ಲಿ ಅನ್ನ ಸಮರ್ಪಣೆ, 15ಕ್ಕೂ ಹೆಚ್ಚು ಶೋಭಾಯಾತ್ರೆಗಳು, ವೇದಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮಠಾಧೀಶರಿಂದ ಪ್ರವಚನ, ಕರಸೇವಕರ ಸನ್ಮಾನ ಹಾಗೂ ಭಕ್ತಿ ಸಮಾರಂಭಗಳು ನಡೆಯುತ್ತಿವೆ.
ಸ್ಟೇಶನ್ ರಸ್ತೆಯಲ್ಲಿರುವ ಈಶ್ವರ ದೇವಸ್ಥಾನ, ಕಮರಿಪೇಟ್ ರಾಮಮಂದಿರ, ದಾಜಿಬಾನಪೇಟನ ತುಳಜಾಭವಾನಿ ದೇವಸ್ಥಾನ, ಗಣೇಶ ದೇವಸ್ಥಾನ, ಮೂರು ಸಾವಿರ ಮಠ, ಸಾಯಿ ಬಾಬಾ ಮಂದಿರ, ಸಿದ್ಧಾರೂಢ ಮಠ ಸೇರಿದಂತೆ ಪ್ರಮುಖ ದೇವಸ್ಥಾನಗಳಲ್ಲಿ ರಾಮಜಪ, ಭಗವದ್ಗೀತೆ ಪಠಣ, ಭಜನೆ, ಭಕ್ತಿಗೀತೆ, ರಾಮನಾಧಾರಿತ ನಾಟಕ ಪ್ರದರ್ಶನ, ನೃತ್ಯ ಪ್ರದರ್ಶನ, ಯಕ್ಷಗಾನ ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ. ಅವಳಿ ನಗರದಲ್ಲಿ ಬಂದೋಬಸ್ತ್‌ಗಾಗಿ 2,500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ಜೊತೆ ಕೆಎಸ್‌ಆರ್‌ಪಿ ತುಕುಡಿ, 100 ಮಂದಿ ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.