ಮೈಸೂರು : ನಾಳೆಯಿಂದ ಮೈಸೂರು ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಆರಂಭವಾಗಲಿದೆ. ರಂಗ ಹಬ್ಬಕ್ಕೆ ರಂಗಾಯಣ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಈ ಬಾರಿ ವಿಶ್ವಗುರು ಬಸವಣ್ಣನವರ 'ಇವ ನಮ್ಮವ ಇವ ನಮ್ಮವ' ಎಂಬ ವಚನದ ಸಾಲನ್ನು ಈ ಬಾರಿಯ ಬಹುರೂಪಿಯ ಶೀರ್ಷಿಕೆಯಾಗಿ ಆಯ್ಕೆ ಮಾಡಲಾಗಿದೆ. ನಾಳೆ ಮಾರ್ಚ್ 06 ರಿಂದ ಮಾರ್ಚ್ 11 ರವರೆಗೆ 06 ದಿನಗಳ ರಂಗಾಯಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ನಡೆಯಲಿದೆ.
ಯಾವಾಗಲೂ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ನಡೆಯುತ್ತಿತ್ತು. ಆದರೆ, ಈ ಬಾರಿ ಶಿವರಾತ್ರಿಯ ಸಂದರ್ಭದಲ್ಲಿ ತಡವಾಗಿ ಬಹುರೂಪಿ ನಡೆಯುತ್ತಿದೆ. ಇದರ ಜೊತೆಗೆ ರಂಗಾಯಣದ ನಿರ್ದೇಶಕರು ಇಲ್ಲದೇ ಬಹುರೂಪಿ ನಡೆಯುತ್ತಿದೆ.
ಈ ನಾಟಕೋತ್ಸವದಲ್ಲಿ ವಿವಿಧ ಬಗೆಯ ಬೇರೆ ಬೇರೆ ರಾಜ್ಯದ ನಾಟಕಗಳು ನಡೆಯುತ್ತವೆ. ಚಲನಚಿತ್ರೋತ್ಸವ, ರಾಷ್ಟ್ರೀಯ ವಿಚಾರ ಸಂಕೀರ್ಣ, ಜನಪದ ಸಂಭ್ರಮ, ಪುಸ್ತಕ ಮೇಳ, ಕರಕುಶಲ ಮೇಳ, ದೇಶಿಯ ಆಹಾರ ಮೇಳ, ಚಿತ್ರಕಲೆ ಪ್ರದರ್ಶನ, ಚಾರಿತ್ರಿಕ ದಾಖಲೆಗಳ ಪ್ರದರ್ಶನ ನಡೆಯಲಿದೆ. ಈ ನಾಟಕೋತ್ಸವದಲ್ಲಿ ಉತ್ತರ ಪ್ರದೇಶ, ಮುಂಬೈ, ಕೋಲ್ಕತ್ತಾ, ಮಣಿಪುರ, ಕೇರಳ, ಮಹಾರಾಷ್ಟ್ರದ 06 ರಾಜ್ಯದ 06 ನಾಟಕಗಳು, ಕನ್ನಡದ 10, ತುಳು ಭಾಷೆಯ 1 ಸೇರಿದಂತೆ ಒಟ್ಟು 17 ನಾಟಕಗಳು, ಭೂಮಿ ಗೀತಾ, ವನರಂಗ, ಕಲಾಮಂದಿರ, ಕಿರುರಂಗ ಮಂದಿರದಲ್ಲಿ ನಡೆಯಲಿದೆ.
ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಆನ್ಲೈನ್ ಮತ್ತು ಆಫ್ಲೈನ್ಗಳಲ್ಲಿ ಟಿಕೆಟ್ಗಳನ್ನು ಖರೀದಿಸಬಹುದಾಗಿದೆ. ಪ್ರತಿ ನಾಟಕಕ್ಕೆ 100 ರೂಪಾಯಿ ಟಿಕೆಟ್ ಬೆಲೆ ಇರಲಿದೆ. ಪ್ರತಿ ನಾಟಕಕ್ಕೆ ಶೇ. 40ರಷ್ಟು ಟಿಕೆಟ್ನ್ನು ಆನ್ಲೈನ್ನಲ್ಲಿ, ಶೇ. 40 ರಷ್ಟು ಟಿಕೆಟ್ ಅನ್ನು ರಂಗಾಯಣದಲ್ಲಿ, ಉಳಿದ 20 ರಷ್ಟನ್ನು ನಾಟಕ ನಡೆಯುವ ದಿನ ಖರೀದಿಸಬಹುದಾಗಿದೆ.
ರಂಗಾಯಣದ ಉಪ ನಿರ್ದೇಶಕಿ ಹೇಳಿದ್ದೇನು? : 'ಇವ ನಮ್ಮವ ಇವ ನಮ್ಮವ' ಎಂಬ ಶೀರ್ಷಿಕೆಯಡಿ ಸರ್ವರನ್ನ ಒಳಗೊಂಡು ಸಮ ಸಮಾಜದ ನಿರ್ಮಾಣಕ್ಕೆ 12ನೇ ಶತಮಾನದಲ್ಲಿ ಯಾವ ರೀತಿ ವಚನಕಾರರು ಮುಂದಾದರೋ, ಅದೇ ರೀತಿ ಸಾಹಿತ್ಯ ಜ್ಞಾನವಿರುವ ನಮ್ಮ ಜಾನಪದ ತಂಡವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಮ್ಮ ಕರಕುಶಲ ಮೇಳ ಇರಬಹುದು, ಪುಸ್ತಕ ಮೇಳ ಇರಬಹುದು, ಒಟ್ಟಾರೆ ಬಹುರೂಪಿಯ ಎಲ್ಲವನ್ನೂ ಆಶಯಕ್ಕೆ ಪೂರ್ವಕವಾಗಿ ರೂಪಿಸುವ ಪ್ರಯತ್ನ ಮಾಡಿದ್ದೇವೆ.
ಈ ವರ್ಷದ ಬಹುರೂಪೀಯ ವಿಶೇಷ ಎಂದರೆ ಪ್ರತಿ ವರ್ಷದಂತೆ ವಸ್ತು ಪ್ರದರ್ಶನ ಜೊತೆಗೆ ಎರಡು ಅಥವಾ ನಾಲ್ಕು ಪ್ರಾತ್ಯಕ್ಷಿಕೆ ಬರುತ್ತಿದ್ದವು. 12ನೇ ಶತಮಾನದಲ್ಲಿ ಕಾಯಕ ಸಿದ್ದಾಂತಕ್ಕೆ ನೈತಿಕ ಮೌಲ್ಯವನ್ನು ತಂದು ಕೊಟ್ಟಿದ್ದು ಚಳವಳಿಗಾರರು. ಅದಕ್ಕೆ ನಾವು ಅವರನ್ನು ಪ್ರತಿ ಬಿಂಬಿಸಬೇಕೆಂದು ನಮ್ಮ ರಂಗಾಯಣದಲ್ಲಿ ಈ ಬಾರಿ 10 ರಿಂದ 11 ಕಾಯಕವನ್ನು ತೋರಿಸುವ ಒಂದು ಪ್ರಾತ್ಯಕ್ಷಿಕೆ ಆಯೋಜಿಸಿರುವುದು ಈ ಬಾರಿಯ ವಿಶೇಷ. ಹಾಗೆಯೇ ಬಸವಣ್ಣ ಅವರ ವಚನಗಳಲ್ಲಿ ಇರುವ ಸಾಮಾಜಿಕ ಕಳಕಳಿಯ ಆಧಾರಿತ ವಚನಗಳನ್ನು, ನಮ್ಮ ಮೈಸೂರಿನ ಚಿತ್ರರಂಗದ ಹಿರಿಯ ಶಿವಲಿಂಗಪ್ಪ ಸೀರೀಸ್ ಪೇಂಟಿಂಗ್ ಮಾಡಿದ್ದಾರೆ ಎಂದರು.
ಆ ಎಲ್ಲ ಪೇಂಟಿಂಗ್ಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆಮೇಲೆ ರಿಯಲಿಸ್ಟಿಕ್ ಪೇಂಟಿಂಗ್ಗಳು ಇವೆ. ಮೈಸೂರಿನ ಪಾರಂಪರಿಕ ಶೈಲಿಯ ಪೇಂಟಿಂಗ್ ಇವೆ. ಹೀಗೆಯೇ ಹತ್ತಾರು ಪೇಂಟಿಂಗ್ಗಳನ್ನು ಮಾರ್ಚ್ 6 ರಿಂದ 10 ರವರೆಗೆ 'ಇವ ನಮ್ಮವ ಇವ ನಮ್ಮವ' ಎಂಬ ಬಹುರೂಪಿಯಲ್ಲಿ ಎಲ್ಲರೂ ಕಾಣಬಹುದು. ಒಟ್ಟು ಯಕ್ಷಗಾನ ಸೇರಿ 19 ನಾಟಕಗಳು ಇವೆ. ಒಟ್ಟು 6 ದಿನಗಳ ಕಾಲ ಈ ನಾಟಕಗಳು ನಡೆಯುತ್ತವೆ ಎಂದು ತಿಳಿಸಿದರು.