ಬಳ್ಳಾರಿ : ಸಂಡೂರು ಬೈ ಎಲೆಕ್ಷನ್ ರಿಸಲ್ಟ್ ಮೇಲೆ ಇಡೀ ರಾಜ್ಯದ ಚಿತ್ತ ನೆಟ್ಟಿದೆ. 3 ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕೆ ಕ್ಷಣಗಣನೆ ಶುರುವಾಗಿದೆ.
ಕಾಂಗ್ರೆಸ್ನ ಭದ್ರಕೋಟೆಯೆಂದು ಬಿಂಬಿತವಾಗಿರುವ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಎದುರಾದ ಉಪಚುನಾವಣೆ ಕಾಂಗ್ರೆಸ್ ಹಾಗೂ ಬಿಜೆಪಿ ಪಾಲಿಗೆ ತೀವ್ರ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿತ್ತು. ಆಡಳಿತ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ಜಿದ್ದಾ ಜಿದ್ದಿ ಒಂದೆಡೆಯಾದರೆ, ಮತ್ತೊಂದೆಡೆ ಕಾಂಗ್ರೆಸ್ನಿಂದ ಸಚಿವ ಸಂತೋಷ್ ಲಾಡ್ ಹಾಗೂ ಬಿಜೆಪಿಯಿಂದ ಶಾಸಕ ಜಿ. ಜನಾರ್ದನ ರೆಡ್ಡಿ ನಡುವೆ ವೈಯಕ್ತಿಕ ವರ್ಚಸ್ಸಿನ ಪ್ರಶ್ನೆಯ ಕಣವಾಗಿ ಮಾರ್ಪಟ್ಟಿತ್ತು.
ಹೀಗಾಗಿ, ಕ್ಷೇತ್ರವನ್ನು ಕಾಂಗ್ರೆಸ್ನ ಭದ್ರಕೋಟೆಯನ್ನಾಗಿ ಉಳಿಸಿಕೊಳ್ಳಲು ಕಾಂಗ್ರೆಸ್ ಶತಾಯಗತಾಯ ಪ್ರಯತ್ನ ನಡೆಸಿತ್ತು. ಇದರೊಂದಿಗೆ ಈ ಬಾರಿ ಕಾಂಗ್ರೆಸ್ ಭದ್ರಕೋಟೆ ಬೇಧಿಸಿ ಜಿಲ್ಲೆಯಲ್ಲಿ ಒಂದಾದರೂ ಕ್ಷೇತ್ರದಲ್ಲಿ ಬಿಜೆಪಿ ಖಾತೆ ತೆರೆಯುವ ಉದ್ದೇಶದೊಂದಿಗೆ ಕಮಲದ ನಾಯಕರು ತೀವ್ರ ಕಸರತ್ತು ನಡೆಸಿದ್ದರು. ಹೀಗಾಗಿ, ಕ್ಷೇತ್ರವನ್ನು ಉಭಯ ಪಕ್ಷಗಳ ಮುಖಂಡರು ಪ್ರತಿಷ್ಠೆಯ ಕಣವಾಗಿ ಸ್ವೀಕರಿಸಿದ್ದು, ಮತದಾರರು ಯಾವ ಪಕ್ಷಕ್ಕೆ ಮಣೆ ಹಾಕಲಿದ್ದಾರೆ ಎಂಬುದನ್ನು ಮಾತ್ರ ಕಾದುನೋಡಬೇಕಿದೆ.
ಶೇ.76.02 ರಷ್ಟು ಮತದಾನ :ಸಂಡೂರು ವಿಧಾನಸಭೆ ಉಪಚುನಾವಣೆಯು ಸುಸೂತ್ರವಾಗಿ ನಡೆದಿದ್ದು, ಶೇ.76.02 ರಷ್ಟು ಮತದಾನವಾಗಿದೆ. ಮತ ಎಣಿಕೆ ಕಾರ್ಯವು ನ.23 ರಂದು ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದ್ದು, ಕೇಂದ್ರ ಚುನಾವಣಾ ಆಯೋಗದ ಮಾರ್ಗದರ್ಶನದಂತೆ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಡೂರು ವಿಧಾನಸಭೆ ಉಪಚುನಾವಣೆಯ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತರಾದ ರಾಜೇಶ್ ಹೆಚ್. ಡಿ ಅವರು ಹೇಳಿದ್ದಾರೆ.
ಸಂಡೂರು ವಿಧಾನಸಭೆ ಉಪಚುನಾವಣೆಯ ಮತ ಎಣಿಕೆ ಕಾರ್ಯ ಕುರಿತಂತೆ ಗುರುವಾರ ಸಹಾಯಕ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಬೆಳಗ್ಗೆ 8 ರಿಂದ ಮತ ಎಣಿಕೆ ಆರಂಭ:ನ.23 ರಂದು ಬೆಳಗ್ಗೆ 08 ಗಂಟೆಯಿಂದ ಮತಗಳ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ 07 ಗಂಟೆಗೆ ಭದ್ರತಾ ಕೊಠಡಿ ತೆರೆಯಲಾಗುವುದು. ಮತ ಎಣಿಕೆ ಕೇಂದ್ರದಲ್ಲಿ 253 ಮತಗಟ್ಟೆಗಳ ಮತಯಂತ್ರಗಳು, 13 ಅಂಚೆ ಮತಗಳ ಎಣಿಕೆ ಮತ್ತು ಇಟಿಪಿಬಿಎಸ್ - 04 ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.
ಮತ ಎಣಿಕೆ ಕಾರ್ಯವನ್ನು ಸುಗಮವಾಗಿ ಕೈಗೊಳ್ಳಲು 14+1 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್ಗೆ ಒಬ್ಬರು ಎಣಿಕಾ ಮೇಲ್ವಿಚಾರಕರು, ಒಬ್ಬರು ಎಣಿಕಾ ಸಹಾಯಕರು, ಒಬ್ಬರು ಮೈಕ್ರೋ ಅಬ್ಸವರ್ಗಳನ್ನ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಸಂಡೂರು ವಿಧಾನಸಭೆ ಉಪಚುನಾವಣೆಯ ಮತ ಎಣಿಕಾ ಕಾರ್ಯಕ್ಕೆ 19 ಎಣಿಕಾ ಮೇಲ್ವಿಚಾರಕರು, 21 ಎಣಿಕಾ ಸಹಾಯಕರು ಮತ್ತು 20 ಎಣಿಕಾ ಮೈಕ್ರೋ ಅಬ್ಸವರ್ಗಳನ್ನ ನೇಮಕ ಮಾಡಲಾಗಿದೆ. ಮತ ಎಣಿಕೆ ಅಧಿಕಾರಿಗಳು, ಸಹಾಯಕರಿಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದರು.