ಕರ್ನಾಟಕ

karnataka

ETV Bharat / state

ನಿಗಮ, ಮಂಡಳಿಗಳ ಅಧ್ಯಕ್ಷರಾಗಿರುವ ಶಾಸಕರಿಗೂ ಸಂಪುಟ ದರ್ಜೆ ಸ್ಥಾನಮಾನ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ - HIGH COURT

ವಿವಿಧ ನಿಗಮ, ಮಂಡಳಿಗಳಿಗೆ ಅಧ್ಯಕ್ಷರು, ದೆಹಲಿ ವಿಶೇಷ ಪ್ರತಿನಿಧಿಯೂ ಆಗಿರುವ ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

petition-in-high-court-challenging-cabinet-rank-of-mlas-who-are-also-chairmen-of-corporation-boards
ಹೈಕೋರ್ಟ್‌ (ETV Bharat)

By ETV Bharat Karnataka Team

Published : Feb 13, 2025, 10:33 PM IST

ಬೆಂಗಳೂರು:ಸಂಪುಟ ದರ್ಜೆ ಸ್ಥಾನಮಾನ ಹಾಗೂ ಸೌಲಭ್ಯಗಳೊಂದಿಗೆ 34 ಮಂದಿ ಶಾಸಕರನ್ನು ವಿವಿಧ ನಿಗಮ, ಮಂಡಳಿಗಳಿಗೆ ಅಧ್ಯಕ್ಷರು, ದೆಹಲಿ ವಿಶೇಷ ಪ್ರತಿನಿಧಿ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಸೇರಿದಂತೆ 8 ಮಂದಿ ಶಾಸಕರಿಗೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಿರುವುದು 'ಸಂವಿಧಾನಬಾಹಿರ' ಎಂದು ಆರೋಪಿಸಿ ಹೈಕೋರ್ಟ್‌ಗೆ ಇಂದು ಅರ್ಜಿ ಸಲ್ಲಿಕೆಯಾಗಿದೆ.

ಬೆಂಗಳೂರು ನಿವಾಸಿ ಸೂರಿ ಪಾಯಲ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ವಿಭಾಗೀಯ ಪೀಠದ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಸಾಯಿ ದೀಪಕ್ ಅವರು ಸುಪ್ರೀಂ ಕೋರ್ಟ್ ಆವರಣದಿಂದ ಆನ್‌ಲೈನ್‌ ಮೂಲಕ ವಾದ ಮಂಡಿಸುತ್ತಿದ್ದರು. ಇದಕ್ಕೆ ಪೀಠ, ''ವಿಷಯ ಬಹಳ ಪ್ರಮುಖವಾಗಿದೆ. ಆನ್‌ಲೈನ್‌ನಲ್ಲಿ ವಾದ ಮಂಡನೆಗೆ ತಾಂತ್ರಿಕ ಅಡಚಣೆ ಉಂಟಾಗುತ್ತಿದೆ. ಹಾಗಾಗಿ, ಖುದ್ದು ಹಾಜರಾಗಿ ವಾದ ಮಂಡಿಸಿ'' ಎಂದು ಸೂಚಿಸಿ, ವಿಚಾರಣೆಯನ್ನು ಫೆಬ್ರವರಿ 21ಕ್ಕೆ ಮುಂದೂಡಿತು.

ಕರ್ನಾಟಕ ವಿಧಾನಸಭೆಯ ಒಟ್ಟು ಸಂಖ್ಯಾಬಲದ ಶೇ.15ರಷ್ಟು ಸಚಿವರಾಗಲು ಅವಕಾಶವಿದೆ. ಅದರಂತೆ 224 ಶಾಸಕರಲ್ಲಿ 34 ಮಂದಿ ಸಚಿವರಾಗಬೇಕು. ಸದ್ಯ ಸಿಎಂ ಸೇರಿ 33 ಮಂದಿ ಸಚಿವರಿದ್ದಾರೆ. ಇದರ ಜೊತೆಗೆ 34 ಮಂದಿ ಶಾಸಕರನ್ನು ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಿಸಿ ಅವರಿಗೆ ಸಂಪುಟದ ದರ್ಜೆ ಸ್ಥಾನಮಾನ, ಸೌಲಭ್ಯ, ವೇತನ, ಭತ್ಯೆಗಳನ್ನು ನೀಡಲಾಗಿದೆ. ಇದು ಸಂವಿಧಾನದ ಪರಿಚ್ಛೇದ 164(1)(ಎ) ಇದರ ಸ್ಪಷ್ಟ ಉಲ್ಲಂಘನೆ ಆಗಿದೆ. ಶಾಸಕರಿಗೆ ನಿಗಮ-ಮಂಡಳಿಗಳ ಹುದ್ದೆ ಕೊಡುವುದಕ್ಕೆ ತಕರಾರು ಇಲ್ಲ. ಆದರೆ, ಸಂಪುಟ ದರ್ಜೆ ನೀಡುವುದಕ್ಕೆ ಆಕ್ಷೇಪವಿದೆ. ಅಲ್ಲದೇ, ಲಾಭದಾಯಕ ಹುದ್ದೆಗೆ ಸಂಬಂಧಿಸಿದಂತೆ ಸಂವಿಧಾನದ ಪರಿಚ್ಛೇದ 191ರ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಆದ್ದರಿಂದ 34 ಮಂದಿ ಶಾಸಕರಿಗೆ ನಿಗಮ, ಮಂಡಳಿ ಅಧ್ಯಕ್ಷ ಹುದ್ದೆ ನೀಡಿ 2024ರ ಜನವರಿ 26ರಂದು ಸರ್ಕಾರ ಹೊರಡಿಸಿರುವ ಹಾಗೂ 8 ಮಂದಿ ಶಾಸಕರಿಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ವಿವಿಧ ಹುದ್ದೆಗಳಿಗೆ ನೇಮಕ ಮಾಡಿ ವಿವಿಧ ದಿನಾಂಕಗಳಂದು ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ನೇಮಕಾತಿಯನ್ನು ಸಂವಿಧಾನಬಾರವೆಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.

ಇದನ್ನೂ ಓದಿ:ಮೃತ ಮಾವನಿಗೆ ಹೆಣ್ಣುಮಕ್ಕಳಿದ್ದರೂ ತನ್ನನ್ನು 'ಮನೆ ಅಳಿಯ'ನೆಂದು ಘೋಷಿಸಲು ಕೋರಿದ್ದ ಅರ್ಜಿ ವಜಾ

ABOUT THE AUTHOR

...view details