ಉಡುಪಿ:ಬೈಂದೂರು ಸಮೀಪ ಸೋಮೆಶ್ವರದ ಬಳಿ ಗುಡ್ಡ ಕುಸಿತವಾದ ಹಿನ್ನೆಲೆಯಲ್ಲಿ ಭಾನುವಾರ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಿಲ್ಲೆಗೆ ಭೇಟಿ ನೀಡಿ, ಪರಿಶೀಲಿಸಿದರು. ಬಳಿಕ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಅನೇಕ ರಸ್ತೆಗಳು ಹಾಳಾಗಿವೆ. ಕಡಲು ಕೊರೆತ, ಬೆಳೆ ಹಾನಿ ವಿವರ ಸಂಗ್ರಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ಕೊಟ್ಟಿದ್ದೇನೆ. ಆದಷ್ಟು ಬೇಗ ಸರ್ಕಾರಕ್ಕೆ ಮಾಹಿತಿ ನೀಡುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಹಾಳದ ರಸ್ತೆಗಳನ್ನು ಆದ್ಯತೆಯ ಮೇಲೆ ದುರಸ್ತಿ ಪಡಿಸಲಾಗುವುದು. ಖಾಸಗಿ ರೆಸಾರ್ಟ್ನಿಂದ ಸಮಸ್ಯೆ ವಿಚಾರದಲ್ಲಿ ಸರ್ಕಾರದ ಕಾಯ್ದೆ ಕಾನೂನಿನ ಚೌಕಟ್ಟಿನಲ್ಲಿ ಕಟ್ಟುತ್ತಿದ್ದಾರಾ? ಎಂದು ಕೇಳಿದೆ. ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಅನುಮತಿ ಪಡೆದಿದ್ದಾರೆ. ಕಾನೂನು ಬಾಹಿರವಾಗಿ ಏನಾದರೂ ಮಾಡಿದರೆ ತಕ್ಷಣ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಸೋಮೇಶ್ವರದ ನಿರಂತರ ಗುಡ್ಡ ಕುಸಿತ, ರಸ್ತೆ ಬಂದ್ : ನಿರಂತರ ಮಳೆಯಿಂದ ಸೋಮೇಶ್ವರದ ಬಳಿ ದೊಂಬೆ ರಸ್ತೆ ಎನ್ನುವಲ್ಲಿ ಗುಡ್ಡ ಜರಿತವಾಗಿದ್ದು, ಜನರು ತಿರುಗಾಡಲು ಹೆದರಿಕೆಯಾಗುತ್ತಿದೆ. ಯಾವಾಗ ಗುಡ್ಡ ಜಾರಿ ಕೆಳಗೆ ಬೀಳುತ್ತದೆಯೋ ಎಂಬ ಭಯದ ವಾತಾವರಣ ನಿರ್ಮಾಣವಾಗಿದೆ. ಅದಲ್ಲದೆ ಗುಡ್ಡದ ಮೇಲೊಂದು ರೆಸಾರ್ಟ್ ನಿರ್ಮಾಣ ಮಾಡುತ್ತಿದ್ದಾರೆ. ಪಂಚಾಯತ್ನವರು ಬದಲಿ ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ಹೇಳಿದ್ದಾರೆ. ಶಾಸಕರು ಬಂದು ಭರವಸೆಯನ್ನು ನೀಡಿದ್ದಾರೆ. ಆದಷ್ಟು ಬೇಗ ಸರಿಯಾದ ವ್ಯವಸ್ಥೆ ಮಾಡಿದರೆ ಉತ್ತಮ ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.