ಗಂಗಾವತಿ:ಕೊಪ್ಪಳ ಜಿಲ್ಲೆಯಲ್ಲಿ ಇಸ್ಪೀಟ್, ಮಟ್ಕಾ ಜೂಜಾಟದ ಬಗ್ಗೆ ದೂರುಗಳು ಕೇಳಿ ಬಂದಿವೆ. ಈ ಬಗ್ಗೆ ಶೀಘ್ರ ಸೂಕ್ತ ಕ್ರಮ ಕೈಗೊಂಡು ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಲಾಗುವುದು ಎಂದು ಬಳ್ಳಾರಿ ವಲಯದ ಐಜಿಪಿ ಆರ್.ಎಸ್. ಲೋಕೋಶ್ ಕುಮಾರ ಹೇಳಿದರು. ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರು ಎಷ್ಟೇ ನಿಗಾವಹಿಸಿದರೂ ಇಸ್ಪೀಟ್ ಮತ್ತು ಮಟ್ಕಾ ಜೂಜಾಟಗಾರರು ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಸಿಕ್ಕರೆ ಪೊಲೀಸರಿಗೆ ನೀಡಬಹುದು ಎಂದು ಕರೆ ನೀಡಿದರು.
112ಗೆ ಕರೆ ಮಾಡಿ:ಇಸ್ಪೀಟ್, ಮಟ್ಕಾ ಜೂಜಾಟ, ಅಕ್ರಮ ಮರಳು ದಂಧೆ ಸೇರಿದಂತೆ ಜನವಸತಿ ಪ್ರದೇಶದಲ್ಲಿ ಏನೇ ಅನೈತಿಕ, ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಬೇಕು. ಜನರು ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡುವ ಅಗತ್ಯವಿಲ್ಲ. ಕೇವಲ ತಮ್ಮ ಮೊಬೈಲ್ನಿಂದ 112ಗೆ ಕರೆ ಮಾಡಿ ಮಾಹಿತಿ ನೀಡಿದರೆ, ಕೇವಲ ಆರು ನಿಮಿಷದಲ್ಲಿ 112 ವಾಹನ ಸ್ಥಳಕ್ಕೆ ಬರುತ್ತದೆ. 112ಗೆ ಕರೆ ಮಾಡಿ ಮಾಹಿತಿ ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವುದು. ಅಕ್ರಮಗಳನ್ನು ನಿಯಂತ್ರಿಸಲು ಸಾರ್ವಜನಿಕರು ಸಹಕರಿಸಬೇಕು. ಜನರು ಜಾಗೃತರಾದರೆ ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಬರುತ್ತವೆ ಎಂದು ತಿಳಿಸಿದರು.