ಬೆಂಗಳೂರು: "ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ" ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೂ ಆದ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. "ಜಲಾಶಯದಲ್ಲಿ ನೀರಿನ ಸಾಮರ್ಥ್ಯ 9.04 ಟಿಎಂಸಿ, ಇದರಲ್ಲಿ ಡೆಡ್ ಸ್ಟೋರೆಜ್ 2 ಟಿಎಂಸಿ, ಈ ಪೈಕಿ ರಾಜ್ಯದ ಪಾಲು 1.860 ಟಿಎಂಸಿ, ಆಂಧ್ರಪ್ರದೇಶದ ಪಾಲು 2.813 ಟಿಎಂಸಿ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯದಲ್ಲಿನ ನೀರಿನ ಲಭ್ಯತೆ ಆಧಾರಿಸಿ ನಾಲ್ಕು ಜಿಲ್ಲೆಗಳಿಗೆ ಕುಡಿಯುವ ನೀರು ಹಂಚಿಕೆ ಮಾಡಲಾಗಿದೆ" ಎಂದು ತಿಳಿಸಿದರು.
"ತುಂಗಭದ್ರಾ ಎಡದಂಡೆ ಮುಖ್ಯಕಾಲುವೆ ಮೂಲಕ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಿಗೆ ಗಣೇಕಲ್ ಜಲಾಶಯ ಹಾಗೂ ಇತರ ಕೆರೆ ಕಟ್ಟೆಗಳಿಗೆ ಮಾ.5ರಿಂದ ಮಾ.16ರವರೆಗೆ 1200 ಕ್ಯೂಸೆಕ್ ನಂತೆ ಕುಡಿಯುವ ನೀರು ಹರಿಸಲಾಗುತ್ತದೆ. ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆ ಮೂಲಕ ಬಳ್ಳಾರಿ ಜಿಲ್ಲೆಗೆ ಹಾಗೂ ಇತರ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ಮಾ.10ರಿಂದ ಮಾ.20ರವರೆಗೆ 100 ಕ್ಯೂಸೆಕ್ನಂತೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಮಾ.21ರಿಂದ ಮಾ.31ರವರೆಗೆ 100 ಕ್ಯೂಸೆಕ್ಸ್ನಂತೆ ಕುಡಿಯುವ ನೀರಿನ ಯೋಜನೆಗೆ ಹಾಗೂ ಕೆರೆ ಕಟ್ಟೆಗಳನ್ನು ತುಂಬಿಸಲಾಗುವುದು" ಎಂದರು.