ಬೆಂಗಳೂರು:ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷಾ ಸಮಯದಲ್ಲಿ 15 ನಿಮಿಷ ಕಡಿತಗೊಳಿಸಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ, ಎಸ್ಎಸ್ಎಲ್ಸಿ ಅರ್ಧವಾರ್ಷಿಕ ಪರೀಕ್ಷೆಯಾದ ಸಂಕಲನಾತ್ಮಕ ಮೌಲ್ಯಮಾಪನ-1ರ ಪರೀಕ್ಷೆಗೆ ಯಾವುದೇ ಸಮಯ ಕಡಿತದ ನಿರ್ಧಾರ ಕೈಗೊಂಡಿಲ್ಲ. ಈ ಹಿಂದಿನಂತೆ ಪರೀಕ್ಷೆ ಬರೆಯಲು 3 ಗಂಟೆ ಹಾಗೂ ಪ್ರಶ್ನೆ ಪತ್ರಿಕೆ ಓದಲು 15 ನಿಮಿಷಗಳ ಸಮಯವನ್ನು ನೀಡಿದೆ.
ಎಸ್ಎಸ್ಎಲ್ಸಿ ಅರ್ಧವಾರ್ಷಿಕ ಪರೀಕ್ಷೆಯಾದ ಸಂಕಲನಾತ್ಮಕ ಮೌಲ್ಯಮಾಪನ-1ರ ವೇಳಾಪಟ್ಟಿ ಬಿಡುಗಡೆಯಾಗಿದೆ. ಸೆಪ್ಟೆಂಬರ್ 24ರಿಂದ ಅಕ್ಟೋಬರ್ 1ರವರೆಗೆ ಪರೀಕ್ಷೆ ನಡೆಯಲಿದೆ. ಇದೇ ಮೊದಲ ಬಾರಿಗೆ ಎಲ್ಲ ಪ್ರೌಢಶಾಲೆಗಳಲ್ಲೂ ಏಕರೂಪದ ಪರೀಕ್ಷೆ ನಡೆಸಲಾಗುತ್ತಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಎಲ್ಲ ವಿಷಯಗಳ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ್ದು, ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಲಿದೆ. ಪರೀಕ್ಷಾ ಸಮಯಕ್ಕೆ ಸರಿಯಾಗಿ ಎಲ್ಲಾ ಶಾಲೆಗಳಿಗೂ ಪ್ರಶ್ನೆ ಪತ್ರಿಕೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.
ಜೆಟಿಎಸ್ ವಿಷಯಗಳ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಹಾಗೂ ಮೌಖಿಕ ಪರೀಕ್ಷೆಗಳನ್ನು ಅಕ್ಟೋಬರ್ 1ರಂದು ಮಧ್ಯಾಹ್ನ 2 ಗಂಟೆವರೆಗೆ ಆಯಾ ಶಾಲಾ ಹಂತದಲ್ಲಿ ನಡೆಸಬೇಕು. ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತದ ತಾತ್ವಿಕ ಪರೀಕ್ಷೆಯನ್ನು ಮಧ್ಯಾಹ್ನ 2 ಗಂಟೆಯಿಂದ 3.45ರ ವರೆಗೆ ಮತ್ತು ಪ್ರಾಯೋಗಿಕ ಪರೀಕ್ಷೆಯನ್ನು ಮಧ್ಯಾಹ್ನ 3.45ರಿಂದ ಸಂಜೆ 5.15ರವರೆಗೆ ನಡೆಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.