ಹೆಚ್.ಡಿ.ದೇವೇಗೌಡ (ETV Bharat) ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ವಿರುದ್ಧ ಕೇಳಿ ಬಂದಿರುವ ಅಶ್ಲೀಲ ಪೆನ್ ಡ್ರೈವ್ ಪ್ರಕರಣದ ಬಗ್ಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಶನಿವಾರ ಪ್ರತಿಕ್ರಿಯಿಸಿದ್ದಾರೆ. ಪ್ರಜ್ವಲ್ ವಿರುದ್ಧದ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಯಾವ ತಕರಾರು ಇಲ್ಲ. ಆದರೆ, ಪ್ರಕರಣದಲ್ಲಿ ಅನೇಕರು ಇದ್ದಾರೆ. ಯಾರ್ಯಾರು ಭಾಗಿಯಾಗಿದ್ದಾರೆ. ಅವರೆಲ್ಲರ ಮೇಲೂ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇಲ್ಲಿನ ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ಪ್ರಜ್ವಲ್ ರೇವಣ್ಣ ಹಾಗೂ ರೇವಣ್ಣ ಅವರ ಬಗ್ಗೆ ಒಂದು ಘಟನೆ ನಡೆಯುತ್ತಿದೆ. ರೇವಣ್ಣ ಅವರ ಬಗ್ಗೆ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಅದರ ಬಗ್ಗೆ ನಾನು ಕಾಮೆಂಟ್ ಮಾಡಲ್ಲ. ಪ್ರಜ್ವಲ್ ರೇವಣ್ಣ ಹೊರಗಡೆ ಹೋಗಿದ್ದಾರೆ. ಆ ಘಟನೆ ಬಗ್ಗೆ ಕುಮಾರಸ್ವಾಮಿಯವರು ಇಡೀ ನಮ್ಮ ಕುಟುಂಬದ ಪರವಾಗಿ, ಕಾನೂನು ಏನಿದೆಯೋ ಆ ಕಾನೂನು ವ್ಯಾಪ್ತಿಯಲ್ಲಿ ಏನೇನೂ ಕ್ರಮ ಕೈಗೊಳ್ಳಬೇಕೋ, ಆ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ ಎಂಬುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಈ ಪ್ರಕರಣದಲ್ಲಿ ಅನೇಕ ಜನರಿದ್ದಾರೆ. ನಾನು ಅವರ ಯಾರ ಹೆಸರನ್ನು ಹೇಳಲು ಹೋಗಲ್ಲ. ಈ ವಿಚಾರದಲ್ಲಿ ಯಾರ್ಯಾರು ಇದ್ದಾರೆ. ಅವರೆಲ್ಲರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ನ್ಯಾಯ ಸಿಗಬೇಕು. ಯಾವ ಹೆಣ್ಣು ಮಕ್ಕಳು ಅಪಾಯಕ್ಕೆ ಸಿಕ್ಕಿದ್ದಾರೆ. ಅವರಿಗೆ ಪರಿಹಾರ ನೀಡಬೇಕು. ಈ ಎಲ್ಲ ವಿಚಾರಗಳನ್ನೂ ಕುಮಾರಸ್ವಾಮಿ ಬಿಡಿಸಿ ಬಿಡಿಸಿ ಹೇಳಿದ್ದಾರೆ ಎಂದು ದೇವೇಗೌಡರು ಹೇಳಿದರು.
ಪ್ರಜ್ವಲ್ ಬಗ್ಗೆ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಯಾವ ತಕರಾರೂ ಇಲ್ಲ. ಆದರೆ, ರೇವಣ್ಣ ಅವರ ಬಗ್ಗೆ ಮಾಡಿರುವುದು ರಾಜ್ಯದ ಜನತೆಗೆ ಗೊತ್ತಿದೆ. ಯಾವ ರೀತಿ ಕೇಸ್ ಸೃಷ್ಟಿ ಮಾಡಿದ್ದಾರೆ ಅಂತ. ಒಂದು ಕೇಸ್ ಮುಗಿದು ಜಾಮೀನು ಕೊಟ್ಟಿದ್ದಾರೆ. ಇನ್ನೊಂದು ನಾಡಿದ್ದು, ತೀರ್ಪು ಬರಲಿದೆ. ಅದು ಯಾವ ರೀತಿ ನಡೆಯಿತು ಅನ್ನೋದನ್ನ ನಾನು ವಿಶ್ಲೇಷಣೆ ಮಾಡಲ್ಲ. ಆದರೆ, ಕುಮಾರಸ್ವಾಮಿ ಅವರು ಖಂಡತುಂಡವಾಗಿ ಈ ಘಟನೆ ಬಗ್ಗೆ ಯಾರನ್ನು ರಕ್ಷಣೆ ಮಾಡಬೇಕಿಲ್ಲ ಅಂತಾ ಹೇಳಿದ್ದಾರೆ. ಇದರಲ್ಲಿ ಭಾಗಿಯಾಗಿರುವ, ಪ್ರಜ್ವಲ್ ಸೇರಿ ತಪ್ಪು ಮಾಡಿದ ಎಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಕುಮಾರಸ್ವಾಮಿ ಹೇಳಿದ್ದಾರೆ ಎಂಬುವುದಾಗಿ ದೇವೇಗೌಡರು ಸ್ಪಷ್ಟಪಡಿಸಿದರು.
ಈ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಕೈವಾಡ ಇದೆ ಮತ್ತು ನನಗೆ 100 ಕೋಟಿ ಆಫರ್ ಕೊಟ್ಟಿದ್ದರು ಎಂಬ ಬಿಜೆಪಿ ಮುಖಂಡ ದೇವರಾಜೇ ಗೌಡರ ಹೇಳಿಕೆ ಬಗ್ಗೆ ಪ್ರಕ್ರಿಯಿಸಿದ ಜೆಡಿಎಸ್ ವರಿಷ್ಠ, ಅವರು ಏನು ಹೇಳಿದ್ದಾರೋ ಅದನ್ನು ಮಾಧ್ಯಮದಲ್ಲಿ ನೋಡಿದ್ದೇವೆ. ಕುಮಾರಸ್ವಾಮಿ ಎಲ್ಲ ವಿಷಯದಲ್ಲೂ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ಅವರು ಪಕ್ಷದ ಅಧ್ಯಕ್ಷರಾಗಿ ಯಾವುದೇ ವಿಷಯ ಬಂದರೂ ಅವರಿಗೆ ಹೋರಾಟದ ಛಲ ಇದೆ. ನಾನು ಚುನಾವಣೆಯಲ್ಲಿ ಎಲ್ಲ ಕಡೆ ಪ್ರಚಾರ ಮಾಡಿದ್ದೇನೆ. ನಾನು ಮತ್ತೆ ಜೂನ್ 4ರಂದು ಚುನಾವಣಾ ಫಲಿತಾಂಶ ಬಂದ ಮೇಲೆ ಪಕ್ಷದ ಕಚೇರಿಯಲ್ಲಿ ಮಾಧ್ಯಮದವರನ್ನು ಭೇಟಿ ಮಾಡುತ್ತೇನೆ. ನಾನು ಅಲ್ಲಿಯವರೆಗೂ ಯಾರನ್ನೂ ಭೇಟಿ ಮಾಡಲ್ಲ ಎಂದು ತಿಳಿಸಿದರು.
ಇವತ್ತು ನನಗೆ 91 ವರ್ಷ ಮುಗೀತು. ನಾನು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬಂದಿದ್ದೇನೆ. ನಾನು ನನ್ನ ಅಭಿಮಾನಿಗಳಿಗೆ ಈಗಾಗಲೇ ಈ ವರ್ಷದ ಹುಟ್ಟುಹಬ್ಬದ ಆಚರಣೆ ಮಾಡಬಾರದು ಅಂತಾ ವಿನಂತಿಸಿದ್ದೇನೆ. ಅಭಿಮಾನಿಗಳು ದೇವಸ್ಥಾನದಲ್ಲಿ ಪೂಜೆ ಮಾಡಿದ್ದಾರೆ. ರಾಜ್ಯದ ಎಲ್ಲ ಅಭಿಮಾನಿಗಳಿಗೆ ಶುಭ ಕೋರುತ್ತೇನೆ ಎಂದು ದೇವೇಗೌಡರು ಇದೇ ವೇಳೆ ಹೇಳಿದರು.
ಇದನ್ನೂ ಓದಿ:ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣರನ್ನ ಆರ್ಥಿಕವಾಗಿ ಕಟ್ಟಿಹಾಕಲು ಎಸ್ಐಟಿ ಸಿದ್ಧತೆ