ಮೈಸೂರು:ನಗರದ ಶ್ರೀಲಕ್ಷೀ ವೆಂಕಟೇಶ್ವರ ದೇವಸ್ಥಾನದಿಂದ ಕೆಆರ್ಎಸ್ ರಸ್ತೆಗೆ ‘ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಎಂದು ಹೆಸರಿಡಲು ಮೈಸೂರು ನಗರ ಪಾಲಿಕೆ ಮುಂದಾಗಿದ್ದು, ಇದಕ್ಕೆ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇದೀಗ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಈ ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೆ ತಪ್ಪಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಮೈಸೂರಿನ ಪಿಕೆಟಿಬಿ (ಪ್ರಿನ್ಸಸ್ ಕೃಷ್ಣರಾಜಮಣಿ ಟ್ಯೂಬಕ್ರ್ಯುಲೋಸಿಸ್ ಹಾಸ್ಪೆಟಲ್) ರಸ್ತೆಗೆ ಪ್ರಿನ್ಸೆಸ್ ರಸ್ತೆ ಅಂತ ನಾಮಕರಣ ಮಾಡಿಲ್ಲ ಅನ್ನುವುದಾದರೆ ಸಿದ್ದರಾಮಯ್ಯ ಅವರ ಹೆಸರನ್ನು ಇಟ್ಟರೆ ತಪ್ಪಿಲ್ಲ. ಈಗಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಸಂಸದ ಯದುವೀರ್ ಅವರು ಆ ರಸ್ತೆಗೆ ಪ್ರಿನ್ಸಸ್ ರಸ್ತೆ ಎಂದು ಹೆಸರಿಡಲಾಗಿದೆ ಎನ್ನುತ್ತಾರೆ. ಆದರೆ ಮತ್ತೆ ಕೆಲವರು ಆ ರಸ್ತೆಗೆ ಯಾವ ಹೆಸರನ್ನು ಇಟ್ಟಿಲ್ಲ ಎನ್ನುತ್ತಾರೆ. ಒಂದು ವೇಳೆ ಆ ರಸ್ತೆಗೆ ಹೆಸರಿಟ್ಟಲ್ಲದಿದ್ದರೆ ಸಿದ್ದರಾಮಯ್ಯ ಅವರ ಹೆಸರು ಇಟ್ಟರೆ ತಪ್ಪಿಲ್ಲ" ಎಂದರು.