ಬೆಳಗಾವಿ: ಹಿಂದಿನಿಂದಲೂ ಬಹಳಷ್ಟು ಜನ ಶಕುನಿ ರಾಜಕಾರಣ ಮಾಡಿದ್ದಾರೆ. ಇದಕ್ಕೆ ಯಾರೂ ಸೊಪ್ಪು ಹಾಕುವುದಿಲ್ಲ. ಸಿದ್ದರಾಮಯ್ಯ, ಡಿಕೆಶಿ ಬಹಳ ಮುತ್ಸದ್ಧಿ ರಾಜಕಾರಣಿಗಳು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಡಿಕೆಶಿ ಕಂಟ್ರೋಲ್‌ನಲ್ಲಿದ್ದಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನಮಗೆ ಸಂಬಂಧನೇ ಇಲ್ಲ. ನಮ್ಮ ಪಕ್ಷಕ್ಕೆ ಅವರು ಸಂಬಂಧ ಇಲ್ಲ, ಉತ್ತರ ಕೊಡುವಷ್ಟು ನಾವು ಚಿಕ್ಕವರೂ ಅಲ್ಲ. ಸಿಎಂ, ಡಿಸಿಎಂ ಮಧ್ಯೆ ವಿಷಬೀಜ ಬಿತ್ತಬೇಕು ಎಂಬುದು ಅವರ ಪೊಲಿಟಿಕಲ್ ಪ್ರೊಪಗಾಂಡಾ ಎಂದು ತಿರುಗೇಟು ನೀಡಿದರು.
40 ವರ್ಷಗಳಿಂದ ಸಿದ್ದರಾಮಯ್ಯ ಅವರು ರಾಜಕೀಯದಲ್ಲಿದ್ದಾರೆ. ಡಿ.ಕೆ.ಶಿವಕುಮಾರ್ 7 ಬಾರಿ ಶಾಸಕರಾಗಿದ್ದಾರೆ, ಯಾರೂ ಚಿಕ್ಕವರಿಲ್ಲ. ಸಿಎಂ ಮಾಡೋದು ನಮ್ಮ ಹೈಕಮಾಂಡ್. ನಮ್ಮ ಪಕ್ಷದ ಮುಖ್ಯಮಂತ್ರಿಯನ್ನು ಏನು ವಿಜಯೇಂದ್ರ ಮಾಡ್ತಾರಾ?. ನಮ್ಮ ಪಕ್ಷದಲ್ಲಿ ಸಿಎಂ ಮಾಡೋದು ಹೈಕಮಾಂಡ್ ಮತ್ತು ಆರಿಸಿ ಬಂದಂತಹ ಶಾಸಕರು ಎಂದು ಹೇಳಿದರು.
ವಿಜಯೇಂದ್ರ, ಡಿಕೆಶಿ ಮಧ್ಯೆ ಹೊಂದಾಣಿಕೆ ರಾಜಕಾರಣ ಇದೆ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪದ ಪ್ರತಿಕ್ರಿಯಿಸಿ, ಯತ್ನಾಳ್ ಮುತ್ಸದ್ಧಿಗಳು, ನಮ್ಮ ಸಮಾಜದ ಹಿರಿಯ ನಾಯಕರು. ವೈಯಕ್ತಿಕವಾಗಿ ಅವರ ಬಗ್ಗೆ ನನಗೆ ಬಹಳ ದೊಡ್ಡ ಅಭಿಮಾನ ಮತ್ತು ಗೌರವವೂ ಇದೆ.
ಆದರೆ, ಅವರ ರಾಜಕೀಯ ಹೇಳಿಕೆಗಳನ್ನು ನೋಡಿ. ಅವರು ಯಾವತ್ತಿದ್ರೂ ಯಡಿಯೂರಪ್ಪನವರ ವಿರುದ್ಧ ಹೇಳಿಕೆ ಕೊಡುತ್ತಾರೆ. ಅವರ ನಿನ್ನೆಯ ಹೇಳಿಕೆ ನೋಡಿ ನನಗೂ ಆಶ್ಚರ್ಯವಾಯಿತು. ಇವರು ತಮ್ಮ ಪಕ್ಷದ ಬಗ್ಗೆ ಮಾತನಾಡಲಿ, ಇನ್ನೊಬ್ಬರ ಬಗ್ಗೆ ಏಕೆ ಮಾತನಾಡ್ತಾರೆ ಎಂದರು.