ಮೈಸೂರು:ಶಾಲೆಯಲ್ಲಿ ಸದ್ಯ ವಾರಕ್ಕೆ 2 ದಿನ ಮಾತ್ರ ಮೊಟ್ಟೆಯನ್ನು ನೀಡಲಾಗುತ್ತಿತ್ತು. ಆದರೆ, ಕೈಗಾರಿಕಾ ಉದ್ಯಮಿ ಅಜಿಮ್ ಪ್ರೇಮ್ಜಿ ಅವರ ಸಿಆರ್‌ಎಫ್ ಫೌಂಡೇಶನ್ ವತಿಯಿಂದ 1591 ಕೋಟಿ ಹಣ ನೀಡಿದ್ದು, ಇದರಿಂದ 1 ರಿಂದ 10 ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ 6 ದಿನ ಮೊಟ್ಟೆಯನ್ನು ನೀಡಬೇಕು ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ ಮಹದೇವಪ್ಪ ಅವರು ಸೂಚನೆ ನೀಡಿದರು.
ಮಹಾರಾಜ ಕಾಲೇಜಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ರಾಜ್ಯ ಸರ್ಕಾರದ ಪಿ.ಎಂ.ಪೋಷಣ್ -ಮಧ್ಯಾಹ್ನ ಉಪಹಾರ ಯೋಜನೆ, ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದಲ್ಲಿ ಶಾಲಾ ಮಕ್ಕಳ ಪೌಷ್ಠಿಕತೆ ವೃದ್ಧಿಸಲು ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಯ ವಿಧ್ಯಾರ್ಥಿಗಳಿಗೆ ವಾರದಲ್ಲಿ ಆರು ದಿನ ಪೌಷ್ಟಿಕ ಆಹಾರ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ವಿಟಮಿನ್ ಮತ್ತು ಪ್ರೋಟೀನ್ ಮುಖ್ಯ. ಆದ್ದರಿಂದ, ಮಕ್ಕಳಿಗೆ ಬಿಸಿ ಊಟದ ಜೊತೆ ಮೊಟ್ಟೆಯನ್ನು ನೀಡಲಾಗುತ್ತಿದೆ. ವಾರದಲ್ಲಿ 2 ದಿನ ಮೊಟ್ಟೆಯನ್ನು ನೀಡುತ್ತಾ ಬಂದಿದ್ದೇವೆ. ಸಿಆರ್‌ಎಫ್ ಫೌಂಡೇಶನ್ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಇಂದಿನ ಸಚಿವ ಸಂಪುಟದಲ್ಲಿ ಹೇಳಿದಂತೆ, ರಾಜ್ಯದಲ್ಲಿ ಶೇಕಡಾ 88 ರಷ್ಟು ಮಕ್ಕಳು ಮೊಟ್ಟೆ ಪಡೆದರೆ ಇನ್ನು ಶೇಕಡಾ 8 ರಷ್ಟು ಮಕ್ಕಳು ಬಾಳೆಹಣ್ಣು ಹಾಗೂ ಉಳಿದ ಶೇಕಡಾ 4ರಷ್ಟು ಮಕ್ಕಳು ಕಡಲೆಹಿಟ್ಟಿನ ಚಕ್ಕುಲಿಯನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.