ಕರ್ನಾಟಕ

karnataka

ETV Bharat / state

ಬಹುತೇಕ ರಾಜ್ಯವನ್ನು ಆವರಿಸಿದ ನೈಋತ್ಯ ಮುಂಗಾರು: 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ - Monsoon - MONSOON

ಹಲವು ಜಿಲ್ಲೆಗಳಲ್ಲಿ ಮುಂಗಾರು ಮಾರುತಗಳು ಆವರಿಸಿರುವ ಹಿನ್ನೆಲೆಯಲ್ಲಿ ಮುಂದಿನ 24 ಗಂಟೆಗಳ ಕಾಲಕ್ಕೆ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ನೈಋತ್ಯ ಮುಂಗಾರು
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : Jun 4, 2024, 11:01 PM IST

ಬೆಂಗಳೂರು: ಮುಂಗಾರು ಮಾರುತಗಳು ಬಹತೇಕ ರಾಜ್ಯವನ್ನು ಆವರಿಸಿದ್ದು, ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ 24 ಗಂಟೆಗಳ ಕಾಲಕ್ಕೆ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ, ಉತ್ತರ ಕರ್ನಾಟಕ ಭಾಗದ ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇಂದು ಮತ್ತು ನಾಳೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುಡುಗುಸಹಿತ ಮಳೆಯಾಗಲಿದೆ. ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು ಭಾರೀ ಮಳೆಯಾಗಲಿದೆ. ಈ ಜಿಲ್ಲೆಗಳಲ್ಲಿ ಗಾಳಿಯ ವೇಗವು 40 ರಿಂದ 50 ಕಿ.ಮೀ ಪ್ರತಿ ಗಂಟೆಯ ವೇಗದಲ್ಲಿ ಉಂಟಾಗಲಿದೆ. ಬಾಗಲಕೋಟೆ, ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ಹಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು 2ರಿಂದ 3 ಡಿಗ್ರಿ ಸೆಲ್ಸಿಯಸ್‌ ಕ್ರಮೇಣ ಕಡಿಮೆಯಾಗಲಿದೆ ಎಂದು ಮಾಹಿತಿ ನೀಡಿದೆ.

ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಸಾಮಾನ್ಯವಾಗಿ ಮೋಡ ಕವಿದ ಆಕಾಶವಿರಲಿದೆ. ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 31 ಡಿಗ್ರಿ ಮತ್ತು 21 ಡಿಗ್ರಿ ಇರಲಿದೆ ಎಂದಿದೆ.

ಬೆಂಗಳೂರು ಹವಾಮಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎನ್.ಪುವಿಯರಸನ್ ಮಾಹಿತಿ ನೀಡಿ, "ನೈಋತ್ಯ ಮಾನ್ಸೂನ್ ಮಧ್ಯ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಗೋವಾ, ಕರ್ನಾಟಕ ಮತ್ತು ತೆಲಂಗಾಣದ, ರಾಯಲಸೀಮೆಯಲ್ಲಿ ಮುಂದುವರೆದಿದೆ. ಮುಂದಿನ 3 ರಿಂದ 4 ದಿನಗಳಲ್ಲಿ ಪಶ್ಚಿಮ, ಕೇಂದ್ರ ಮತ್ತು ವಾಯುವ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಲ್ಲಿ ಮುಂಗಾರು ಮಾರುತಗಳು ಅವರಿಸಕೊಳ್ಳಲಿದೆ" ಎಂದು ಹೇಳಿದ್ದಾರೆ.

"ಮಧ್ಯ ಅರೇಬಿಯನ್ ಸಮುದ್ರದ ಭಾಗಗಳು, ಕರ್ನಾಟಕದ ಉಳಿದ ಭಾಗಗಳಲ್ಲಿ, ದಕ್ಷಿಣ ಮಹಾರಾಷ್ಟ್ರದ, ತೆಲಂಗಾಣ ಮತ್ತು ಕರಾವಳಿ ಆಂಧ್ರಪ್ರದೇಶ, ದಕ್ಷಿಣ ಛತ್ತೀಸ್​ಗಡ ಮತ್ತು ದಕ್ಷಿಣ ಒಡಿಶಾದಲ್ಲಿ ನೈಋತ್ಯ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಅನುಕೂಲಕರವಾದ ವಾತಾವರಣವಿದೆ. ಕೇರಳ ಮೇಲೆನ ಸುಳಿಗಾಳಿ ಪರಿಚಲನೆಯು ಈಗ ದಕ್ಷಿಣ ತಮಿಳುನಾಡು ಮತ್ತು ನೆರೆಹೊರೆಯಲ್ಲಿ ಸರಾಸರಿ ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದಲ್ಲಿದೆ" ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ: ಅಡಿಕೆ ತೋಟಗಳು ಜಲಾವೃತ - Heavy Rain In Chikkamagaluru

ABOUT THE AUTHOR

...view details