ಮಾದಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹ; ದಾಂಪತ್ಯಕ್ಕೆ ಕಾಲಿಟ್ಟ 64 ಜೋಡಿಗಳು (ETV Bharat) ಚಾಮರಾಜನಗರ: ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು 64 ನವಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟರು.
ಶ್ರೀ ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ವಿಜೃಂಭಣೆಯಿಂದ ನಡೆದ ಉಚಿತ ಸಾಮೂಹಿಕ ವಿವಾಹದಲ್ಲಿ 64 ನೂತನ ಜೋಡಿಗಳು ಸತಿ-ಪತಿಗಳಾದರು. ಸುತ್ತೂರು ಶ್ರೀ ಮತ್ತು ಸಾಲೂರು ಮಠದ ಸ್ವಾಮೀಜಿ ಹಾಗೂ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ನೂತನ ದಂಪತಿಗಳಿಗೆ ಮಾಂಗಲ್ಯ ವಿತರಿಸಿ ಶುಭ ಹಾರೈಸಿದರು.
ನವಜೋಡಿಗಳಿಗೆ ಮಾಂಗಲ್ಯ ವಿತರಿಸುತ್ತಿರುವ ಸುತ್ತೂರು ಶ್ರೀ ಮತ್ತು ಸಚಿವ ರಾಮಲಿಂಗಾರೆಡ್ಡಿ (ETV Bharat) ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಪ್ರತಿ ವರ್ಷ ಸಾಮೂಹಿಕ ವಿವಾಹ ನಡೆದಿದ್ದು, ಮಾದಪ್ಪನ ಸನ್ನಿಧಿಯಲ್ಲಿ ಸತಿಪತಿಗಳಾಗುವುದು ಪುಣ್ಯ ಎಂಬುದು ಭಕ್ತರ ನಂಬಿಕೆಯಾಗಿದೆ.
ಸಾಮೂಹಿಕ ವಿವಾಹದಲ್ಲಿ ಭಾಗಿಯಾದ ನವಜೋಡಿಗಳಿಗೆ ಮಾಂಗಲ್ಯ, ರೇಷ್ಮೆ ಸೀರೆ, ಪಂಚೆ- ಶಲ್ಯ, ಬೆಳ್ಳಿ ಕಾಲುಂಗರವನ್ನು ಪ್ರಾಧಿಕಾರ ನೀಡಿತು. ಸಚಿವರೊಂದಿಗೆ ಹನೂರು ಶಾಸಕ ಎಂ.ಆರ್. ಮಂಜುನಾಥ್, ಕಾಡಾ ಅಧ್ಯಕ್ಷ ಮರಿಸ್ವಾಮಿ ಇದ್ದರು.
ಮಾದಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹ (ETV Bharat) ಸಿಎಂ ಸಿದ್ದರಾಮಯ್ಯ ಗೈರು: ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಿರಲಿದ್ದು, ಕಳೆದ ವರ್ಷ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದರು. ಆದರೆ, ಈ ಬಾರಿ ಸಿದ್ದರಾಮಯ್ಯ ಬರುತ್ತಾರೆ ಎನ್ನಲಾಗುತ್ತಿದ್ದರೂ ಕೊನೆ ದಿನಗಳಲ್ಲಿ ರದ್ದಾಯಿತು. ಪ್ರಾಧಿಕಾರದ ಉಪಾಧ್ಯಕ್ಷರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಕೂಡ ಗಜ ಪಯಣ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಗೈರಾದರು.
ಮಾದಪ್ಪನಿಗೆ ನಮಿಸಿದ ಮುಜರಾಯಿ ಸಚಿವ:ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಬಂದಿದ್ದ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಮೊದಲು ಮಾದಪ್ಪನ ದರ್ಶನ ಪಡೆದು ವಿಶೇಷ ಪೂಜೆ ನೆರವೇರಿಸಿದರು.
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗಿಯಾದ ಸುತ್ತೂರು ಶ್ರೀ, ಸಚಿವರು ಮತ್ತು ಅಧಿಕಾರಿಗಳು (ETV Bharat) ಜಿಲ್ಲಾಡಳಿತ ಮತ್ತು ಪ್ರಾಧಿಕಾರದಿಂದ ವತಿಯಿಂದ ಸಚಿವರಿಗೆ ಪೂರ್ಣಕುಂಭ ಸ್ವಾಗತ ನೀಡಿ ಬರ ಮಾಡಿಕೊಳ್ಳಲಾಯಿತು. ಬಳಿಕ, ಮಲೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ, ಅರ್ಚನೆ ಮಾಡಿಸಿದರು.
ಇದನ್ನೂ ಓದಿ: 'ಚೆಲುವ ಚಾಮರಾಜನಗರ ಬ್ರ್ಯಾಂಡ್'ಗೆ ರಾಯಭಾರಿಯ ಹುಡುಕಾಟ - Cheluva Chamarajanagar Brand