ಬೆಂಗಳೂರು: ಕಾರ್ಯಕ್ರಮಕ್ಕೆ ಶಾಸಕರನ್ನು ಕರೆಯಲಿಲ್ಲ ಎನ್ನುವ ಒಂದೇ ಕಾರಣಕ್ಕೆ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದ ಯುವಕರ ಮೇಲೆ ದಬ್ಬಾಳಿಕೆ ನಡೆಸಿ ಲಾಠಿಚಾರ್ಜ್ ಮಾಡಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೆರಗೋಡು ಗ್ರಾಮದಲ್ಲಿ ಏನೆಲ್ಲಾ ಧ್ವಂಸ ಮಾಡಲಾಗಿಯೋ ಅದೆಲ್ಲಾ ಯಥಾಸ್ಥಿತಿಗೆ ಬರಬೇಕು. ನಾನು ಕೆರಗೋಡು ಗ್ರಾಮದ ಯುವಕರ ಜತೆ ಇದ್ದೇನೆ ಎಂದು ತಿಳಿಸಿದ್ದಾರೆ.
ಮಂಡ್ಯದ ಕೆರಗೋಡುನಲ್ಲಿ ಹನುಮ ಧ್ವಜದ ವಿಷಯದಲ್ಲಿ ಪೊಲೀಸರು, ರಾಜ್ಯ ಕಾಂಗ್ರೆಸ್ ಸರ್ಕಾರದ ವರ್ತನೆ ಅಕ್ಷಮ್ಯ, ಅನಾಗರೀಕ. ಕಾಂಗ್ರೆಸ್‌ನ ಕಣಕಣದಲ್ಲೂ ಜನದ್ವೇಷವೇ ತುಂಬಿದೆ. ಆ ಮನಃಸ್ಥಿತಿಯನ್ನು ಮತ್ತೆಮತ್ತೆ ರುಜುವಾತು ಮಾಡುತ್ತಿದೆ. ಮುಗ್ಧ ಯುವಕರ ಮೇಲೆ ಲಾಠಿಚಾರ್ಜ್ ಮಾಡುವವರೆಗೂ ಆ ದ್ವೇಷ ಬಂದು ನಿಂತಿದೆ ಎಂದು ಅವರು ಕಿಡಿಕಾರಿದ್ದಾರೆ.
ಕೆರಗೋಡುನಲ್ಲಿ ಯುವಕರು ತಾವೇ ಹಣ ಸಂಗ್ರಹಿಸಿ ಭಕ್ತಿಯಿಂದ ಸ್ಥಾಪಿಸಿದ ಹನುಮ ಧ್ವಜಸ್ತಂಭ ಧ್ವಂಸ ಮಾಡಿ ಧ್ವಜ ಇಳಿಸಿದ್ದು, ಪ್ರಶ್ನಿಸಿದ ಹನುಮಭಕ್ತ ಯುವಕರ ಮೇಲೆ ಲಾಠಿಚಾರ್ಜ್ ಮಾಡಿರುವ ಪೊಲೀಸರ ವರ್ತನೆ ಅತಿರೇಕದ್ದು. ಲಾಠಿಚಾರ್ಜ್ ಮಾಡಲು ಇವರಿಗೆ ಆದೇಶಿಸಿದ ಆ ಪ್ರಭೃತಿ ಯಾರು?. ಯುವಕರು ಪಂಚಾಯಿತಿ ಅನುಮತಿ ಪಡೆದೇ ದ್ವಜಸ್ತಂಭ ನಿರ್ಮಿಸಿದ್ದಾರೆ. ಧೈರ್ಯ, ಸಾಹಸ, ನಂಬಿಕೆ, ನಿಷ್ಠೆ, ಭಕ್ತಿಯ ಪ್ರತೀಕನಾದ ಹನುಮ ದೇವರು ಯುವಕರ ಆದರ್ಶ. ಹಳ್ಳಿಗರ ಭಾವನೆಗಳನ್ನು ಗೌರವಿಸದಷ್ಟು ಅಸಹಿಷ್ಣುತೆಯ ಉರಿಯಲ್ಲಿ ಸರ್ಕಾರ ಬೇಯುತ್ತಿದೆ. ಶಾಸಕರನ್ನು ಕರೆಯಲಿಲ್ಲ ಎನ್ನುವ ಕಾರಣಕ್ಕೆ ಇಷ್ಟೆಲ್ಲಾ ಮಾಡಬೇಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.