ಮೈಸೂರು :ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಸಭೆಗೆ ಕೋರ್ಟ್ ತಡೆಯಾಜ್ಞೆ ಇದ್ದು, ಸೆಪ್ಟೆಂಬರ್ 5ರ ವರೆಗೆ ಯಥಾಸ್ಥಿತಿ ಕಾಪಾಡಿಕೊಂಡು ಹೋಗಬೇಕೆಂಬ ಆದೇಶವಿದೆ. ಇದರ ನಡುವೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯುತ್ತಿರುವುದು ತಡೆಯಾಜ್ಞೆಯ ಉಲ್ಲಂಘನೆಯಾಗಿದೆ. ಇದರ ವಿರುದ್ಧ ತಾಯಿ (ಪ್ರಮೋದ ದೇವಿ ಒಡೆಯರ್) ಕಾನೂನು ಹೋರಾಟ ನಡೆಸುತ್ತಾರೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು.
ಇಂದು ತಮ್ಮ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಸಂಸದ ಯದುವೀರ್ ಒಡೆಯರ್ ಅವರು, ಸಿಎಂ ನೇತೃತ್ವದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ನಡೆಸುತ್ತಿರುವುದು ಸರಿಯಲ್ಲ. ಪ್ರಾಧಿಕಾರದ ಸಭೆಗೆ ಕೋರ್ಟ್ ತಡೆಯಾಜ್ಞೆ ಇದ್ದರೂ ಸಿಎಂ ಸಭೆ ನಡೆಸುತ್ತಿದ್ದಾರೆ. ಈ ಸಭೆಗೆ ನಮಗೆ ಮತ್ತು ನಮ್ಮ ತಾಯಿ ಅವರಿಗೆ ಆಹ್ವಾನ ಇದ್ದರೂ ಸಭೆಯಲ್ಲಿ ಭಾಗವಹಿಸುತ್ತಿಲ್ಲ ಎಂದರು.
ಧಾರ್ಮಿಕ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬಾರದು: ಸರ್ಕಾರ ತಡೆಯಾಜ್ಞೆ ತೆರವಾಗಿದೆ ಎಂಬ ಹೇಳಿಕೆ ನೀಡಿ ಸಭೆ ನಡೆಸುತ್ತಿರುವುದು ಕೋರ್ಟ್ ಆದೇಶದ ಉಲ್ಲಂಘನೆಯಾಗುತ್ತದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ನಾವು ಕಾನೂನು ಹೋರಾಟ ಮುಂದುವರೆಸುತ್ತೇವೆ. ಪ್ರಾಧಿಕಾರದ ರಚನೆಯನ್ನು ವಿರೋಧಿಸಿ ನಾವು ನ್ಯಾಯಾಲಯದಲ್ಲಿ ಚಾಲೆಂಜ್ ಮಾಡುತ್ತೇವೆ. ಧಾರ್ಮಿಕ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬಾರದು ಎಂದು ಹೇಳಿದರು.