ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ 384 ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗಾಗಿ ನಡೆದ ಪರೀಕ್ಷೆ ಸುಸೂತ್ರವಾಗಿ ಜರುಗಿದೆ. ಇಂದು ಪರೀಕ್ಷಾ ಕೇಂದ್ರದ ಸುತ್ತಮುತ್ತ ಪೊಲೀಸರು ಸೇರಿದಂತೆ ಗುಪ್ತಚರ ಸಿಬ್ಬಂದಿಗಳನ್ನು ನೇಮಕ ಮಾಡಿ ಯಾವುದೇ ಅಕ್ರಮ ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು.
ರಾಜ್ಯದ 204 ಸರ್ಕಾರಿ, 189 ಅನುದಾನಿತ ಹಾಗೂ 161 ಖಾಸಗಿ ಶಾಲಾ - ಕಾಲೇಜುಗಳಲ್ಲಿ ಪರೀಕ್ಷೆ ನಡೆದಿದ್ದು, ಬೆಳಗ್ಗೆ 10 ಗಂಟೆಯಿಂದ 12 ಗಂಟೆವರೆಗೆ ಪರೀಕ್ಷೆ ಒಂದು ಹಾಗೂ ಮಧ್ಯಾಹ್ನ 2 ರಿಂದ 4ರ ವರೆಗೆ ಎರಡನೇಯ ಪರೀಕ್ಷೆ ಯಾವುದೇ ಗೊಂದಲವಿಲ್ಲದಂತೆ ನಡೆದಿದೆ ಎಂದು ರಾಜ್ಯ ಲೋಕಸೇವಾ ಆಯೋಗ ತಿಳಿಸಿದೆ.
ಈ ಬಾರಿ ಕೆಪಿಎಸ್‌ಸಿ ವೆಬ್ಸೈಟ್ನಿಂದ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಗುರುತಿನ ಚೀಟಿಯೊಂದಿಗೆ ಪರೀಕ್ಷೆಗೆ ಹಾಜರಾಗಬೇಕಿತ್ತು. ಮೊಬೈಲ್, ಬ್ಲೂಟೂತ್, ಸ್ಮಾರ್ಟ್ ವಾಚ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ನಿಷೇಧಿಸಲಾಗಿತ್ತು. ಶೂ, ಕಾಲಚೀಲ ಧರಿಸುವುದು, ತುಂಬುತೋಳಿನ ಶರ್ಟ್ ಧರಿಸುವುದನ್ನು ಕೂಡ ನಿಷೇಧಿಸಲಾಗಿತ್ತು. ಪರೀಕ್ಷೆಗೆ ಸಾಮಾನ್ಯ ಚಪ್ಪಲಿ ತೊಟ್ಟು ಬರುವಂತೆ ಸೂಚಿಸಲಾಗಿತ್ತು.
ಕಳೆದ ಆಗಸ್ಟ್‌ನಲ್ಲಿ ನಡೆದಿದ್ದ ಪೂರ್ವಭಾವಿ ಪರೀಕ್ಷೆಯಲ್ಲಿ ಕನ್ನಡ ಪತ್ರಿಕೆಯ ಭಾಷಾಂತರ ದೋಷ ಕಂಡುಬಂದು ಸಾಕಷ್ಟು ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದು ಮಾಡಲಾಗಿತ್ತು. ಆದ್ದರಿಂದ ಈ ಬಾರಿ ಯಾವುದೇ ಗೊಂದಲವಾಗದಂತೆ ತಡೆಯಲು ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಪರೀಕ್ಷಾ ಕೇಂದ್ರದ ಸುತ್ತ ಹದ್ದಿನ ಕಣ್ಣಿಟ್ಟಿದ್ದರು.
ಇದನ್ನೂ ಓದಿ:ವಿಜಯಪುರದಲ್ಲಿ ಅಖಿಲ ಕರ್ನಾಟಕ ಅಂಧರ ಪ್ರಥಮ ಸಾಹಿತ್ಯ ಸಮ್ಮೇಳನ