ಕರ್ನಾಟಕ

karnataka

ETV Bharat / state

SSLC ರಿಸಲ್ಟ್‌: ಶೇ.73.40ರಷ್ಟು ಫಲಿತಾಂಶ, ಉಡುಪಿ ಫಸ್ಟ್, ಬಾಲಕಿಯರ ಮೇಲುಗೈ - SSLC Result

SSLC ಪರೀಕ್ಷೆ 1 ಫಲಿತಾಂಶ ಇಂದು ಪ್ರಕಟವಾಗಿದೆ. ಉಡುಪಿ ಮೊದಲ ಸ್ಥಾನ ಪಡೆದರೆ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಕಳೆದ ಬಾರಿಗೆ ಹೋಲಿಸಿದರೆ ಶೇ.10ರಷ್ಟು ಫಲಿತಾಂಶ ಇಳಿಕೆಯಾಗಿದೆ.

SSLC ಪರೀಕ್ಷೆ ಫಲಿತಾಂಶ
SSLC ಪರೀಕ್ಷೆ ಫಲಿತಾಂಶ (ETV Bharat)

By ETV Bharat Karnataka Team

Published : May 9, 2024, 11:04 AM IST

Updated : May 9, 2024, 1:24 PM IST

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ (ETV Bharat)

ಬೆಂಗಳೂರು:ಎಸ್​ಎಸ್​ಎಲ್​ಸಿ ಪರೀಕ್ಷೆ-1ರ ಫಲಿತಾಂಶ ಇಂದು ಪ್ರಕಟವಾಗಿದೆ. ಎಂದಿನಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧಿಕಾರಿಗಳು ಮಾಧ್ಯಮಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು.

ಶೇ.73.40ರಷ್ಟು ಫಲಿತಾಂಶ: ಈ ಬಾರಿ ಶೇ.73.40ರಷ್ಟು ಫಲಿತಾಂಶ ಬಂದಿದೆ. ಶೇ.81.11ರಷ್ಟು ಬಾಲಕಿಯರು, ಶೇ.65.90ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ.

ಉಡುಪಿ ಫಸ್ಟ್‌, ಯಾದಗಿರಿ ಲಾಸ್ಟ್‌: ಕಳೆದ ಬಾರಿ 14ನೇ ಸ್ಥಾನದಲ್ಲಿದ್ದ ಉಡುಪಿಗೆ ಮೊದಲ ಸ್ಥಾನ, ಕಳೆದ ಬಾರಿ ಕಡೆಯ ಸ್ಥಾನದಲ್ಲಿದ್ದ ಯಾದಗಿರಿಗೆ ಈ ಬಾರಿಯೂ ಕಡೆಯ ಸ್ಥಾನ ಲಭಿಸಿದೆ. ಒಟ್ಟು 78 ಶಾಲೆಗಳಲ್ಲಿ ಶೇ.100 ಫಲಿತಾಂಶ ದಾಖಲಾಗಿದೆ.

ಕಳೆದ ಬಾರಿಗಿಂತ ಕಡಿಮೆ ಫಲಿತಾಂಶ: ಪರೀಕ್ಷೆ ಬರೆದಿದ್ದ 8,59,967 ವಿದ್ಯಾರ್ಥಿಗಳಲ್ಲಿ 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ಬಾರಿಗೆ ಹೋಲಿಸಿದರೆ ಶೇ.10 ರಷ್ಟು ಫಲಿತಾಂಶ ಕುಸಿತ ಕಂಡಿದೆ. ಕಳೆದ ಬಾರಿ ಶೇ.83.89ರಷ್ಟು ಬಂದಿದ್ದ ಫಲಿತಾಂಶ ಈ ಬಾರಿ ಶೇ.73.40ಕ್ಕೆ ಇಳಿದಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಮಂಜುಶ್ರೀ ಮಾಹಿತಿ ನೀಡಿದರು.

ಕೃಪಾಂಕ ಶೇ.20ಕ್ಕೆ ಹೆಚ್ಚಳ: ಇದೇ ಮೊದಲ ಬಾರಿಗೆ ವೆಬ್ ಕಾಸ್ಟಿಂಗ್ ವಿಧಾನ ಪರಿಚಯಿಸಿದ್ದರಿಂದ ಕಡಿಮೆಯಾಗಿರುವ ಫಲಿತಾಂಶ ಉತ್ತಮಪಡಿಸಲು ಕೃಪಾಂಕ ಹೆಚ್ಚಿಸಲಾಗಿದೆ. ಈ ಬಾರಿಯ ಪರೀಕ್ಷೆ -1 ರ ಉತ್ತೀರ್ಣಕ್ಕೆ ಬೇಕಾದ ಅಂಕಗಳನ್ನು ಶೇ.35 ರಿಂದ ಶೇ.25ಕ್ಕೆ ಇಳಿಕೆ ಮಾಡಲಾಗಿದೆ. ಕೃಪಾಂಕ ನೀಡುವುದನ್ನು ಶೇ.10ರಿಂದ 20ಕ್ಕೆ ಹೆಚ್ಚಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ. ಇದೇ ವಿಧಾನ ಇನ್ನೆರಡು ಪರೀಕ್ಷೆಗೂ ಇರಲಿದೆ. ವೆಬ್ ಕಾಸ್ಟಿಂಗ್ ಕಾರಣಕ್ಕೆ ಈ ಬಾರಿ ಮಾತ್ರ ಈ ರೀತಿ ಕೃಪಾಂಕ ಹೆಚ್ಚಿಸಲಾಗಿದೆ. ಮುಂದಿನ ವರ್ಷದಿಂದ ಈವರೆಗೂ ಇದ್ದ ರೀತಿಯಲ್ಲೇ ಕನಿಷ್ಠ ಅಂಕ ಶೇ.35 ಇರಲಿದೆ ಎಂದರು‌.

ಫೇಲ್‌ ಅಲ್ಲ, ಇನ್ ಕಂಪ್ಲೀಟ್: ಈ ಬಾರಿಯ ಫಲಿತಾಂಶದಲ್ಲಿ ಯಾರನ್ನೂ ಅನುತ್ತೀರ್ಣ ಎಂದು ಘೋಷಿಸುತ್ತಿಲ್ಲ, ಇನ್ ಕಂಪ್ಲೀಟ್ ಎಂದಷ್ಟೇ ದಾಖಲಿಸಲಾಗುತ್ತದೆ. ಪರೀಕ್ಷೆ -2, 3 ರ ನಂತರ ಅನುತ್ತೀರ್ಣ ಎಂದು ಘೋಷಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ವಿದ್ಯಾರ್ಥಿಗಳೇ ಗಮನಿಸಿ: ಉತ್ತರ ಪತ್ರಿಕೆ ಸ್ಕ್ಯಾನ್ ಪ್ರತಿ ಪಡೆಯಲು ಮೇ 9 ರಿಂದ 16 ರವರೆಗೆ ಕಾಲಾವಕಾಶ ನೀಡಲಾಗಿದೆ. ಉತ್ತರ ಪತ್ರಿಕೆ ಮರು ಮೌಲ್ಯಮಾಪನ, ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಮೇ 13 ರಿಂದ 22 ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ವಿವರಿಸಿದರು.

ಇವರು ಟಾಪರ್ಸ್​:ಬಾಗಲಕೋಟೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಗ್ರಾಮದ ಮೊರಾರ್ಜಿ ದೇಸಾಯಿ ಶಾಲೆಯ ಅಂಕಿತ ಬಸಪ್ಪ ಕೊನ್ನೂರು 625 ಕ್ಕೆ 625 ಅಂಕ ಪಡೆದು ಮೊದಲ ಸ್ಥಾನ ಪಡೆದಿದ್ದಾರೆ. ಹಾಗೆಯೇ ಬೆಂಗಳೂರಿನ ಮೇಧ ಪಿ ಶೆಟ್ಟಿ, ಮಧುಗಿರಿ ಶಾಲೆಯ ಹರ್ಷಿತಾ, ಧರ್ಮಸ್ಥಳ ಶಾಲೆಯ ಚಿನ್ಮಯ್, ಚಿಕ್ಕೋಡಿ ಶಾಲೆಯ ಸಿದ್ದಾಂತ, ಶಿರಸಿಯ ದರ್ಶನ್ ಸುಬ್ರಾಯ್ ಭಟ್, ಚಿನ್ಮಯಿ ಶ್ರೀ ಪಾದ ಹೆಗ್ಡೆ, ಶ್ರೀರಾಮ್ 624 ಅಂಕ ಪಡೆದು ರಡನೇ ಸ್ಥಾನ ಪಡೆದುಕೊಂಡಿದ್ದಾರೆ.

ಪರೀಕ್ಷೆ 2 ದಿನಾಂಕ ಪ್ರಕಟ: ಜೂನ್ 7ರಿಂದ ಜೂನ್ 14 ರವರೆಗೆ ಎಸ್ಎಸ್ಎಲ್​ಸಿ ಪರೀಕ್ಷೆ -2 ನಡೆಯಲಿದೆ.

ಗ್ರಾಮೀಣ ವಿದ್ಯಾರ್ಥಿಗಳ ಮೇಲುಗೈ:ನಗರ ಪ್ರದೇಶದ ವಿದ್ಯಾರ್ಥಿಗಳು ಶೇ.72.83, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶೇ.74.17ರಷ್ಟು ತೇರ್ಗಡೆಯಾಗಿದ್ದಾರೆ.

ಸರ್ಕಾರಿ ಶಾಲೆಗಳ ಫಲಿತಾಂಶ ಶೇ.72.46, ಅನುದಾನಿಯ ಶಾಲೆಗಳ ಫಲಿತಾಂಶ ಶೇ.72.22, ಅನುದಾನರಹಿತ ಶಾಲೆಗಳ ಫಲಿತಾಂಶ ಶೇ.86.46 ರಷ್ಟು ದಾಖಲಾಗಿದೆ.

ಶೂನ್ಯ ಫಲಿತಾಂಶ:03 ಸರ್ಕಾರಿ ಶಾಲೆ, 13 ಅನುದಾನಿತ ಮತ್ತು 62 ಅನುದಾನರಹಿತ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ.

SSLC ರಿಸಲ್ಟ್‌ (ETV Bharat)

2024ರ ಎಸ್​ಎಸ್​ಎಲ್​ಸಿ ಪರೀಕ್ಷೆ-1ನ್ನು ಮಾರ್ಚ್ 25ರಿಂದ ಏಪ್ರಿಲ್ 06ರವರೆಗೆ ನಡೆಸಲಾಗಿತ್ತು. 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ 4,41,910 ವಿದ್ಯಾರ್ಥಿಗಳು ಮತ್ತು 4,28,058 ವಿದ್ಯಾರ್ಥಿನಿಯರಿದ್ದರು.

ಫಲಿತಾಂಶ ನೋಡುವುದು ಹೇಗೆ?: ವಿದ್ಯಾರ್ಥಿಗಳು ರಿಜಿಸ್ಟರ್ ನಂಬರ್ (ನೋಂದಣಿ ಸಂಖ್ಯೆ) ಮೂಲಕ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ https://karresults.nic.in ಜಾಲತಾಣದಲ್ಲಿ ಫಲಿತಾಂಶ ವೀಕ್ಷಿಸಬಹುದು.

ಇದನ್ನೂ ಓದಿ:ಎಸ್​ಎಸ್​ಎಲ್​ಸಿಯಲ್ಲಿ 2ನೇ ರ‍್ಯಾಂಕ್ ಪಡೆದ ಮಂಗಳೂರಿನ ಬೆಸ್ಟ್ ಫ್ರೆಂಡ್ಸ್ ಪಿಯುಸಿಯಲ್ಲೂ ಟಾಪರ್ಸ್‌ - PU Toppers

Last Updated : May 9, 2024, 1:24 PM IST

ABOUT THE AUTHOR

...view details