ಮಂಗಳೂರು: ಕಾಲಿಯ ರಫೀಕ್ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ನಿರಾಪರಾಧಿ ಎಂದು ಘೋಷಿಸಿ ದಕ್ಷಿಣ ಕನ್ನಡ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಧೀಶರಾದ ಮಲ್ಲಿಕಾರ್ಜುನ ಸ್ವಾಮಿಯವರು ಆದೇಶಿಸಿದ್ದಾರೆ.
2017 ಫೆ. 14 ರಂದು ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆಟ್ರೋಲ್ ಪಂಪ್ ಮುಂಭಾಗ ರಫೀಕ್ ಮತ್ತು ಆತನ ಸ್ನೇಹಿತರು ಬರುತ್ತಿದ್ದಾಗ ಸಂಚು ರೂಪಿಸಿ ಅಪಘಾತ ಮಾಡಲಾಗಿತ್ತು. ಈ ವೇಳೆ ಪೆಟ್ರೋಲ್ ಪಂಪ್ ಕಡೆಗೆ ಓಡಿದ ರಫೀಕ್‌ನ್ನು ಆರೋಪಿಗಳು ಬೆನ್ನು ಹತ್ತಿಕೊಂಡು ಹೋಗಿ ಪಿಸ್ತೂಲಿನಿಂದ ಗುಂಡು ಹಾರಿಸಿ ಹಾಗೂ ತಲವಾರಿನಿಂದ ತೀವ್ರ ಸ್ವರೂಪದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಪ್ರಕರಣದಲ್ಲಿ 9 ಆರೋಪಿಗಳ ವಿರುದ್ಧ ದೂರು ದಾಖಲಾಗಿತ್ತು. ಇದರಲ್ಲಿ ನಾಲ್ವರನ್ನು ಆ ವೇಳೆ ಬಂಧಿಸಲಾಗಿತ್ತು. ಇವರ ವಿರುದ್ಧ ಅಂದಿನ ತನಿಖಾಧಿಕಾರಿಯಾಗಿದ್ದ ಉಳ್ಳಾಲ ಪೊಲೀಸ್ ನಿರೀಕ್ಷಕರಾದ ಕೆ.ಆರ್. ಗೋಪಿಕೃಷ್ಣ ಅವರು ನ್ಯಾಯಾಲಯಕ್ಕೆ ಪ್ರಕರಣದ ಆರೋಪ ಪಟ್ಟಿ ಸಲ್ಲಿಸಿದ್ದರು.
ಆರೋಪಿಗಳು ರಫೀಕ್ನನ್ನು ಕೊಲೆ ಮಾಡುವ ಬಗ್ಗೆ ಕೇರಳ ರಾಜ್ಯದ ಮಂಜೇಶ್ವರ ತಾಲೂಕಿನ ಹಿದಾಯತ್ ನಗರ ಎಂಬಲ್ಲಿರುವ ಕ್ಲಬ್ವೊಂದರಲ್ಲಿ ಅಂದು ಬೆಳಗ್ಗೆ 11 ಗಂಟೆಗೆ ಒಟ್ಟು ಸೇರಿ ಒಳ ಸಂಚು ನಡೆಸಿದ್ದರು. ಈ ಬಗ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಈ ಆರೋಪಗಳನ್ನು ಸಾಬೀತುಪಡಿಸಲು ಸರ್ಕಾರದ ಪರವಾಗಿ ಅಭಿಯೋಜಕರು 31 ಸಾಕ್ಷಿಗಳನ್ನು ವಿಚಾರಣೆ ಮಾಡಿದ್ದು, 68 ದಾಖಲೆಗಳನ್ನು ಕೋರ್ಟ್ಗೆ ಸಲ್ಲಿಸಲಾಗಿತ್ತು.