ಹುಬ್ಬಳ್ಳಿ:ಯೋಗಾಸನದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಮೂಲಕ ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದ ಅಂತಾರಾಷ್ಟ್ರೀಯ ಯೋಗಪಟು ಡಾ.ಶ್ರೀಧರ್ ಹೊಸಮನಿ ಮಹತ್ವದ ಸಾಧನೆ ಮಾಡಿದ್ದಾರೆ.
ಥೈಲ್ಯಾಂಡ್ ದೇಶದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ ಚಾಂಪಿಯನ್ಶಿಪ್ನಲ್ಲಿ ದ್ವೀತಿಯ ಸ್ಥಾನ ಪಡೆದು ದೇಶ ಹಾಗೂ ಹುಬ್ಬಳ್ಳಿ- ಧಾರವಾಡದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಥೈಲ್ಯಾಂಡ್ ಯೂಥ್ ಯೋಗ ಅಸೋಸಿಯೇಷನ್, ವರ್ಲ್ಡ್ ಯೂಥ್ ಯೋಗ ಫೆಡರೇಶನ್, ವರ್ಷಿಣಿ ಯೋಗ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ ರಿಜಿಸ್ಟರ್ಡ್ ಶಿವಮೊಗ್ಗ ಇವರ ಸಹಭಾಗಿತ್ವದಲ್ಲಿ ಡಿಸೆಂಬರ್ 9 ರಂದು ಥೈಲ್ಯಾಂಡ್ ದೇಶದ ಪಟ್ಟಾಯದಲ್ಲಿ ನಡೆದ 6ನೇ ವರ್ಷದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ 31-40 ವರ್ಷದ ವಯೋಮಿತಿಯಲ್ಲಿ ದ್ವಿತೀಯ ಸ್ಥಾನದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
ಹೊಸಮನಿ ಅವರು ಹುಬ್ಬಳ್ಳಿ ಪಕ್ಕದ ಕುಸುಗಲ್ ಗ್ರಾಮದ ನಿವಾಸಿಯಾಗಿದ್ದು, ಯೋಗದಲ್ಲಿ ಸಾಕಷ್ಟು ಸಾಧನೆ ಮಾಡಿದ್ದಾರೆ. ತಂದೆ ಯಂಕಪ್ಪ ಹೆಚ್. ನಿವೃತ್ತ ಉದ್ಯೋಗಿ ಮತ್ತು ತಾಯಿ ಶಕುಂತಲಾ ಹೆಚ್ ಅವರು ಗೃಹಿಣಿ. ಶ್ರೀಧರ್ ಅವರು 2009 ರಿಂದ ಯೋಗಾಭ್ಯಾಸ ಮಾಡುತ್ತಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ನೌಕರರಾಗಿ ಮತ್ತು ಧಾರವಾಡದ ಆಯುಷ್ ಇಲಾಖೆಯಲ್ಲಿ ಅರೆಕಾಲಿಕ ಯೋಗ ಬೋಧಕರಾಗಿ ಕೆಲಸ ಮಾಡುತ್ತಿದ್ದಾರೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಯೋಗದಲ್ಲಿ ಡಿಪ್ಲೋಮಾದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ನಂತರ ಧಾರವಾಡದ ಆಯುಷ್ ಇಲಾಖೆಯಲ್ಲಿ ಯೋಗ ತರಬೇತುದಾರರಾಗಿ ಕೆಲಸ ಮಾಡಿದ್ದಾರೆ. ಬೋಧಕರಾಗಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ 2 ಸಾವಿರಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಿದ್ದಾರೆ. ಶುಲ್ಕವಿಲ್ಲದೆ ಹಲವು ಶಾಲಾ-ಕಾಲೇಜುಗಳಲ್ಲಿ ತರಬೇತಿ ನೀಡಿದ್ದಾರೆ.