ಮೈಸೂರು:ಇಲ್ಲಿನ ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಪ್ರತ್ಯಕ್ಷವಾಗಿದ್ದಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರೆದಿದ್ದು, ಸುರಕ್ಷತಾ ಕ್ರಮವಾಗಿ ಕಂಪನಿಯ ಟ್ರೈನಿ ಉದ್ಯೋಗಿಗಳಿಗೆ ಜನವರಿ 26ರವರೆಗೆ ರಜೆ ಘೋಷಣೆ ಮಾಡಲಾಗಿದೆ.
ಕಳೆದ 10 ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ, ಬೋನಿಗೆ ಬೀಳದೆ ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ. ಕ್ಯಾಮೆರಾದಲ್ಲಿ ಚಿರತೆಯ ಚಲನವಲನ ಸೆರೆಯಾಗಿದೆ. ಆದರೆ ಕಾರ್ಯಾಚರಣೆ ವೇಳೆ ಇನ್ನೂ ಪತ್ತೆಯಾಗದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಡಿಸೆಂಬರ್ 31ರಂದು ಮುಂಜಾನೆ ಇನ್ಫೋಸಿಸ್ ಭದ್ರತಾ ಸಿಬ್ಬಂದಿಯ ಜೀಪ್ ಎದುರು ಚಿರತೆಯೊಂದು ಹಾದು ಹೋಗಿತ್ತು. ಅಲ್ಲದೆ, ಅಂದು ಚಿರತೆಯ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿತ್ತು. ಇದನ್ನು ಹೊರತುಪಡಿಸಿದರೆ, ಕಳೆದ 9 ದಿನದಿಂದ ಚಿರತೆ ಯಾರ ಕಣ್ಣಿಗೂ ಕಂಡಿಲ್ಲ. ಅದರ ಸೆರೆಗಾಗಿ ಇನ್ಫೋಸಿಸ್ ಆವರಣದಲ್ಲಿ 12ಕ್ಕೂ ಹೆಚ್ಚು ಕ್ಯಾಮರಾ ಟ್ರ್ಯಾಪ್ ಅಳವಡಿಸಲಾಗಿದ್ದು, ಎರಡು ಬೋನ್ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.