ಮೈಸೂರು: ನಾನು ಸಿಎಂ ರೇಸ್ನಲ್ಲಿ ಇಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆಯೇ ಇಲ್ಲ ಎಂದಮೇಲೆ ಸಿಎಂ ರೇಸ್ನಲ್ಲಿ ಇರಲು ಹೇಗೆ ಸಾಧ್ಯ?. ಸಿದ್ದರಾಮಯ್ಯ ಜೊತೆಗಿದ್ದೇವೆ ಎಂದು ಎಐಸಿಸಿ ಹೇಳಿದೆ. ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ರಾಜೀನಾಮೆ ನೀಡುವುದಿಲ್ಲ. ಅದರ ಅಗತ್ಯತೆಯೂ ಈಗಿಲ್ಲ ಎಂದರು.
ಹರಿಯಾಣದಲ್ಲಿ ಕಾಂಗ್ರೆಸ್ ಸೋಲಿಗೆ ಮುಡಾ ಹಗರಣ ಕಾರಣವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ನಾವು ಹರಿಯಾಣದ ಸೋಲಿನ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಎಐಸಿಸಿ ಈ ಬಗ್ಗೆ ಆತ್ಮಾವಲೋಕನ ಮಾಡುತ್ತದೆ. ಅದಕ್ಕೂ ಮುಂಚೆಯೇ ಹರಿಯಾಣ ಸೋಲಿಗೆ ಮುಡಾ ಹಗರಣ ಕಾರಣ ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸಚಿವ ಜಿ.ಪರಮೇಶ್ವರ್ (ETV Bharat) ದಲಿತ ನಾಯಕರ ಭೇಟಿ ವಿಚಾರವಾಗಿ ಮಾತನಾಡುತ್ತಾ, ದಲಿತ ನಾಯಕರು ಒಂದೆಡೆ ಸೇರಿ ಕಾಫಿ ಕುಡಿದರೆ ದಲಿತ ನಾಯಕರ ಸಭೆ ಆಗುತ್ತದೆಯಾ?. ಸದ್ಯ ಆ ರೀತಿ ರಾಜಕಾರಣ ಮಾಡುವ ಅಗತ್ಯವಿಲ್ಲ. ಒಂದು ವೇಳೆ ಆ ರೀತಿ ಮಾಡಬೇಕು ಎಂದರೆ ಮಾಡೋಣ ಎಂದು ಹೇಳಿದರು.
ಮೈಸೂರು ಪೊಲೀಸ್ ಬ್ಯಾಂಡ್ ಇಡೀ ದೇಶದಲ್ಲೇ ಪ್ರಖ್ಯಾತಿ ಪಡೆದಿದೆ. ಶಾಸ್ತ್ರೀಯ ಮತ್ತು ಬ್ರಿಟಿಷ್ ಸಂಗೀತವನ್ನು ಸೇರಿಸಿ ಮಹಾರಾಜರ ಕಾಲದಿಂದ ಈ ಬ್ಯಾಂಡ್ ನಡೆಸಲಾಗುತ್ತಿದೆ. ಕಳೆದ 25 ವರ್ಷಗಳಿಂದ ದಸರಾದಲ್ಲಿ ಪೊಲೀಸ್ ಬ್ಯಾಂಡ್ ಕಾರ್ಯಕ್ರಮ ಇರುತ್ತದೆ. ನಾವೂ ಕೂಡ ಇದರಲ್ಲಿ ಪ್ರತೀ ವರ್ಷ ಅಭಿವೃದ್ಧಿಯನ್ನು ಮಾಡುತ್ತಾ ಬಂದಿದ್ದೇವೆ. ವಿಶೇಷ ಎಂದರೆ ಮಹಾರಾಜರ ಕಾಲದ ಸಂಗೀತ ಪರಿಕರಗಳು ಈಗಲೂ ಕೆಲಸ ಮಾಡುತ್ತಿವೆ. ನಮ್ಮ ಪೊಲೀಸರು ಅದನ್ನು ಈಗಲೂ ನುಡಿಸುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್