ಕರ್ನಾಟಕ

karnataka

ETV Bharat / state

ಲೈಸನ್ಸ್ ಇಲ್ಲದ ಗೂಡ್ಸ್ ಆಟೋದಲ್ಲಿ ಪ್ರಯಾಣಿಕರ ಸಾಗಿಸಿ ಮಹಿಳೆ ಸಾವು; ಚಾಲಕನಿಗೆ ನೀಡಲಾದ ಜೈಲು ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್ - HIGH COURT ORDER

ಚಾಲಕ ಪರವಾನಿಗೆ ಪಡೆಯುವುದಕ್ಕೂ ಮುನ್ನವೇ ವಾಹನವನ್ನು ರಸ್ತೆಗಿಳಿಸಿ ಕಾನೂನುಬಾಹಿರವಾಗಿ ಪ್ರಯಾಣಿಕರನ್ನು ಕರೆದೊಯ್ದಿದ್ದಾನೆ. ಹೀಗಾಗಿ ಶಿಕ್ಷೆಗೆ ಅರ್ಹ ಎಂದು ಹೈಕೋರ್ಟ್ ತಿಳಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : Jan 14, 2025, 7:58 AM IST

Updated : Jan 14, 2025, 8:51 AM IST

ಬೆಂಗಳೂರು: ಶಿಕ್ಷೆಗೆ ಗುರಿಯಾದ ಆರೋಪಿ ಸಾಕ್ಷ್ಯಾಧಾರಗಳನ್ನು ನಿರಾಕರಿಸಿದ ತಕ್ಷಣ ನಿರಪರಾಧಿ ಆಗಲಾರ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಹೊಸದಾಗಿ ಖರೀದಿಸಿದ ಸರಕು ಸಾಗಣೆ (ಗೂಡ್ಸ್) ಆಟೋಗೆ ಪರವಾನಿಗೆ ಪಡೆಯುವುದಕ್ಕೂ ಮುನ್ನ ಹಣದಾಸೆಗಾಗಿ ಪ್ರಯಾಣಿಕರನ್ನು ಕೊಂಡೊಯ್ದು ಒಬ್ಬ ಮಹಿಳೆ ಸಾವಿಗೆ ಕಾರಣವಾದ ಚಾಲಕನಿಗೆ ವಿಧಿಸಿದ್ದ ಒಂದು ವರ್ಷ ಜೈಲು ಶಿಕ್ಷೆಯನ್ನು ಹೈಕೋರ್ಟ್ ಎತ್ತಿ ಹಿಡಿಯಿತು.

ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಧಿಸಿದ್ದ ಶಿಕ್ಷೆ ರದ್ದುಕೋರಿ ಪಾಂಡವಪುರ ತಾಲೂಕಿನ ಅಟ್ಟಿಗನಹಳ್ಳಿಯ ನಿವಾಸಿ ಕೃಷ್ಣಾ ಎಂಬವರು ಸಲ್ಲಿಸಿದ್ದ ಕ್ರಿಮಿನಲ್ ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರಿದ್ದ ನ್ಯಾಯಪೀಠ ಸೋಮವಾರ ಈ ಆದೇಶ ನೀಡಿದೆ.

ಘಟನೆಗೆ ಕಾರಣವಾದ ವಾಹನ ಸರಕು ಸಾಗಿಸುವುದು ಮತ್ತು ಆ ಸರಕಿಗೆ ಸಂಬಂಧಿಸಿದ ಒಬ್ಬ ವ್ಯಕ್ತಿಯನ್ನು ಹೊರತುಪಡಿಸಿ ಇತರರನ್ನು ಹತ್ತಿಸಿಕೊಳ್ಳುವಂತಿಲ್ಲ. ಆದರೆ, ಹಣದಾಸೆಗಾಗಿ ಚಾಲಕ ಪರವಾನಿಗೆ ಪಡೆಯುವುದಕ್ಕೂ ಮುನ್ನ ರಸ್ತೆಗಿಳಿಸಿ ಕಾನೂನುಬಾಹಿರವಾಗಿ ಪ್ರಯಾಣಿಕರನ್ನು ಕರೆದೊಯ್ದಿದ್ದಾನೆ. ಹೀಗಾಗಿ ಶಿಕ್ಷೆಗೆ ಅರ್ಹನಾಗಿದ್ದು, ಅರ್ಜಿ ವಜಾಗೊಳಿಸುತ್ತಿರುವುದಾಗಿ ಪೀಠ ಹೇಳಿದೆ.

ಆರೋಪಿ ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾನೆ. ಆದರೆ, ಅದಕ್ಕೆ ವಿವರಣೆ ನೀಡಿಲ್ಲ. ಆರೋಪಿತರ ವಿರುದ್ಧದ ಸಾಕ್ಷ್ಯಗಳನ್ನು ನಿರಾಕರಿಸಿದ ಎಂಬ ಕಾರಣಕ್ಕೆ ಅವರನ್ನು ನಿರಪರಾಧಿ ಎಂಬುದಾಗಿ ದೃಢಪಡಿಸುವುದಕ್ಕೆ ಸಾಧ್ಯವಾಗದು ಎಂದು ಪೀಠ ತಿಳಿಸಿತು.

ವಾಹನದಲ್ಲಿ ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲ. ಘಟನೆ ನಡೆದ ರಸ್ತೆಯೂ ನೇರವಾಗಿದ್ದು, ಯಾವುದೇ ಹಳ್ಳಗಳಿರಲಿಲ್ಲ. ಘಟನೆಗೆ ಮತ್ತೊಂದು ವಾಹನ ಕಾರಣವಾಗಿಲ್ಲ. ಆದರೂ ಚಾಲಕನ ನಿಯಂತ್ರಣ ತಪ್ಪಿದೆ. ಇದಕ್ಕೆ ಚಾಲಕನ ಅತಿವೇಗವೇ ಕಾರಣವಲ್ಲದಿದ್ದರೆ ಆಟೋ ಸ್ವಯಂಪ್ರೇರಿತವಾಗಿ ಪಲ್ಟಿ ಹೊಡೆಯಲು ಸಾಧ್ಯವೇ ಎಂದು ಪ್ರಶ್ನಿಸಿರುವ ಪೀಠ, ಆರೋಪಿಗೆ ಘಟನೆ ಕುರಿತು ಸಂಪೂರ್ಣ ಗೊತ್ತಿದ್ದ ಕಾರಣದಿಂದ ಸಾಕ್ಷಿಗಳ ಹೇಳಿಕೆಯನ್ನು ನಿರಾಕರಿಸಿದ್ದಕ್ಕೆ ಸ್ಪಷ್ಟನೆ ನೀಡಿಲ್ಲ ಎಂದು ಪೀಠ ಆದೇಶದಲ್ಲಿ ಉಲ್ಲೇಖಿಸಿದೆ.

ಆಟೋ ಚಾಲಕನ ನಿರ್ಲಕ್ಷ್ಯ-ವಿಚಾರಣಾ ನ್ಯಾಯಾಲಯದ ಆದೇಶ ಸರಿ- ಹೈಕೋರ್ಟ್‌: ಬಸ್ ಸೌಲಭ್ಯವಿಲ್ಲ ಎಂಬ ಕಾರಣ ನೀಡಿ ಆಟೋ ಚಾಲಕರು ಎಲ್ಲ ಪ್ರಯಾಣಿಕರನ್ನು ತುಂಬಿಕೊಂಡು ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿದ್ದರು ಎಂಬುದಾಗಿ ಸಾಕ್ಷಿಗಳು ವಿವರಿಸಿದ್ದಾರೆ. ಸುಮಾರು ಐದು ಜನ ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿರುವಾ ರಸ್ತೆ ಅಪಘಾತ ಸಂಭವಿಸಿ ಓರ್ವ ಮಹಿಳೆ ಸಾವನ್ನಪ್ಪಿ, ಇನ್ನುಳಿದವರು ಗಾಯಗೊಂಡಿದ್ದರು. ಅಪಘಾತದಲ್ಲಿ ಪ್ರಜ್ಞೆ ತಪ್ಪಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊಲೀಸರಿಗೆ ಘಟನೆ ಕುರಿತು ತನಿಖಾಧಿಕಾರಿಗಳಿಗೆ ವಿವರಿಸಿದ್ದಾರೆ. ಆಟೋ ಚಾಲಕರ ಅತಿ ವೇಗ ಮತ್ತು ನಿರ್ಲಕ್ಷ್ಯತನವನ್ನು ಪರಿಗಣಿಸಿಯೇ ಸಾಕ್ಷ್ಯಾಧಾರಗಳನ್ನು ಆಧರಿಸಿ ವಿಚಾರಣಾ ನ್ಯಾಯಾಲಯ ಶಿಕ್ಷೆ ವಿಧಿಸಿರುವುದು ಸರಿಯಾಗಿದೆ ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: 2007ರ ಸೆಪ್ಟೆಂಬರ್ 23ರಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಕೆಆರ್‌ಎಸ್‌ನಿಂದ ಕೆ.ನಾಗನಹಳ್ಳಿ ಕಡೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಾರ್ಗದಲ್ಲಿ ಹೊಸ ಸರಕು ಸಾಗಣೆ ಆಟೋ ಅಪಘಾತಕ್ಕೀಡಾಗಿತ್ತು. ನಾಗಮ್ಮ ಎಂಬ ಪ್ರಯಾಣಿಕರೊಬ್ಬರಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಇತರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಯೆಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಟೋ ಚಾಲಕ ಕೃಷ್ಣಾ ವಿರುದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಅಪರಾಧಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 2500 ರೂ.ಗಳ ದಂಡ ವಿಧಿಸಿ ಆದೇಶಿಸಿತ್ತು.

ಇದನ್ನು ಅರ್ಜಿದಾರ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ, ಮ್ಯಾಜಿಸ್ಟ್ರೆಟ್ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಎತ್ತಿ ಹಿಡಿದು ಅರ್ಜಿ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಕ್ರಿಮಿನಲ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಒಬ್ಬ ವ್ಯಕ್ತಿಯೇ ಆರ್‌ಟಿಐ ಅಡಿ ಸಲ್ಲಿಸಿದ್ದ 9 ಸಾವಿರಕ್ಕೂ ಹೆಚ್ಚು ಅರ್ಜಿ ವಜಾ; ₹9.6 ಲಕ್ಷ ಶುಲ್ಕ ಪಾವತಿಗೆ ಹೈಕೋರ್ಟ್​ ಆದೇಶ

ಇದನ್ನೂ ಓದಿ: ಪದವಿ ಪ್ರಮಾಣಪತ್ರವಿದ್ದರೆ 3 ವರ್ಷದ ಎಲ್‌ಎಲ್‌ಬಿ ಕೋರ್ಸ್​ಗೆ ಪಿಯುಸಿ ಪ್ರಮಾಣಪತ್ರ ಅಗತ್ಯವಿಲ್ಲ: ಹೈಕೋರ್ಟ್

Last Updated : Jan 14, 2025, 8:51 AM IST

ABOUT THE AUTHOR

...view details