ಕರ್ನಾಟಕ

karnataka

ETV Bharat / state

ಮೃತ ಮಾವನಿಗೆ ಹೆಣ್ಣುಮಕ್ಕಳಿದ್ದರೂ ತನ್ನನ್ನು 'ಮನೆ ಅಳಿಯ'ನೆಂದು ಘೋಷಿಸಲು ಕೋರಿದ್ದ ಅರ್ಜಿ ವಜಾ - HIGH COURT

ಮೃತ ವ್ಯಕ್ತಿಗೆ ಹೆಣ್ಣುಮಕ್ಕಳಿದ್ದರೂ, ತನ್ನನ್ನು ಮನೆ ಅಳಿಯ ಎಂಬುದಾಗಿ ಘೋಷಿಸಲು ಕೋರಿ ಅಳಿಯನೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

high-court-dismisses-petition-seeking-to-declare-him-as-son-in-law
ಹೈಕೋರ್ಟ್ (ETV Bharat)

By ETV Bharat Karnataka Team

Published : Feb 13, 2025, 4:59 PM IST

ಬೆಂಗಳೂರು: ಮೃತ ವ್ಯಕ್ತಿಗೆ ನಾಲ್ಕು ಮಂದಿ ಹೆಣ್ಣು ಮಕ್ಕಳಿದ್ದರೂ, ತನ್ನನ್ನು ಮನೆ ಅಳಿಯ ಎಂಬುದಾಗಿ ಘೋಷಣೆ ಮಾಡಬೇಕು ಎಂದು ಕೋರಿ ಅಳಿಯನೊಬ್ಬ (ಮೊದಲ ಮಗಳ ಗಂಡ) ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ನಿವಾಸಿಯು ತನ್ನನ್ನು ಮಾವನ ಮನೆಗೆ ಮನೆ ಅಳಿಯ ಎಂದು ಘೋಷಣೆ ಮಾಡಬೇಕು. ಮಾವನ ಕಾನೂನುಬದ್ಧ ವಾರಸುದಾರರನ್ನಾಗಿ ಪರಿಗಣಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನಗಂಟಿ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ಮನವಿಯನ್ನು ಅಂಗೀಕರಿಸಿದಲ್ಲಿ, ಅವರು ತನ್ನ ಮಾವನ ಮನೆ ಅಳಿಯ ಎಂದು ಒಪ್ಪಿಕೊಂಡಂತಾಗಲಿದೆ. ಇದಕ್ಕೆ ಕಾನೂನಿನಲ್ಲಿ ಅವಕಶವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಮೃತಪಟ್ಟ ವ್ಯಕ್ತಿಯ ಆಸ್ತಿಯನ್ನು ಪ್ರತಿನಿಧಿಸುವುದು ಮತ್ತು ಮೃತರ ಹಿತಾಸಕ್ತಿಗಳನ್ನು ರಕ್ಷಣೆ ಮಾಡುವುದು ಮಾತ್ರ ಕಾನೂನುಬದ್ಧ ಉತ್ತರಾಧಿಕಾರಿಯ ಕರ್ತವ್ಯವಾಗಿರಲಿದೆ. ಆದರೆ, ಈ ಪ್ರಕರಣದಲ್ಲಿ ಮೃತಪಟ್ಟವರ ಆಸ್ತಿಯನ್ನು ರಕ್ಷಣೆ ಮಾಡುವುದಕ್ಕಾಗಿ ಕಾನೂನುಬದ್ಧ ಉತ್ತರಾಧಿಕಾರಿಗಳಿದ್ದಾರೆ. ಜೊತೆಗೆ, ಅರ್ಜಿದಾರರೂ ಮೃತರ ಆಸ್ತಿಯಲ್ಲಿ ಭಾಗವನ್ನು ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ, ಅವರನ್ನು ಕಾನೂನು ಪ್ರತಿನಿಧಿಯನ್ನಾಗಿ ಘೋಷಣೆ ಮಾಡಲಾಗುವುದಿಲ್ಲ ಎಂಬುದಾಗಿ ತಿಳಿಸಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ನ್ಯಾಯಪೀಠ ಎತ್ತಿ ಹಿಡಿದು, ಅರ್ಜಿಯನ್ನು ವಜಾಗೊಳಿಸಿದೆ.

ಪ್ರಕರಣದ ಹಿನ್ನೆಲೆ :ಅರ್ಜಿದಾರರು ತನ್ನದೇ ಗ್ರಾಮದ ಮಹಿಳೆಯನ್ನು ವಿವಾಹವಾಗಿದ್ದರು. ಬಳಿಕ ಆಸ್ತಿಯಲ್ಲಿ ಪಾಲು ನೀಡಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಮಾವ (ಪತ್ನಿಯ ಅಪ್ಪ) ಮೃತಪಟ್ಟಿದ್ದರು. ಹೀಗಾಗಿ, ತನ್ನನ್ನು ಮಾವನ ಮನೆಗೆ ಮನೆ ಅಳಿಯ ಎಂದು ಘೋಷಣೆ ಮಾಡಬೇಕು ಮತ್ತು ಆಸ್ತಿಯಲ್ಲಿ ಭಾಗ ಮಾಡಬೇಕು ಎಂದು ಕೋರಿ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಶಿವಮೊಗ್ಗ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ರದ್ದುಪಡಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

ಇದನ್ನೂ ಓದಿ:ಕೊಡಗು ಕಟ್ಟೆಮಾಡು ಮಹಾಮೃತ್ಯುಂಜಯ ದೇವಸ್ಥಾನದ ವಸ್ತ್ರ ಸಂಹಿತೆಗೆ ಹೈಕೋರ್ಟ್ ತಡೆ

ABOUT THE AUTHOR

...view details