ಬೆಂಗಳೂರು:ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ ಆರೋಪದಲ್ಲಿ ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿ ಆದೇಶಿಸಿದೆ.
ತನ್ನ ವಿರುದ್ಧ ಮ್ಯಾಜಿಸ್ಟ್ರೇಟ್ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಪ್ರಕರಣ ಸಂಬಂಧ ತೆಗೆದುಕೊಂಡಿರುವ ಕಾಗ್ನಿಜೆನ್ಸ್ ಮತ್ತು ಆ ಸಂಬಂಧ ಜಾರಿ ಮಾಡಿರುವ ಸಮನ್ಸ್ ರದ್ದುಪಡಿಸಬೇಕು ಎಂದು ಕೋರಿ ಸುರೇಶ್‌ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ಅರ್ಜಿದಾರರು ದೂರುದಾರರ ವಿರುದ್ಧ ನೀಡಿರುವ ಹೇಳಿಕೆಗಳು ಮಾನಹಾನಿಕರವಾಗಿಲ್ಲ ಎಂದಾದರೆ, ಆ ಸಂಬಂಧ ಸಂಪೂರ್ಣ ವಿಚಾರಣೆ ಎದುರಿಸಿ ಆರೋಪ ಮುಕ್ತರಾಗಿ ಹೊರ ಬರಬೇಕಾಗಿದೆ ಎಂದು ತಿಳಿಸಿ ಆರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಜೊತೆಗೆ, ಪ್ರಕರಣ ಸಂಬಂಧ ವಿವೇಚನೆ ಬಳಸದೇ ವಿಚಾರಣಾ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿದೆ ಎಂಬ ಅರ್ಜಿದಾರರ ಪರ ವಾದವನ್ನು ತಳ್ಳಿ ಹಾಕಿರುವ ನ್ಯಾಯಪೀಠ, ಪ್ರಕರಣದಲ್ಲಿ ವಿವೇಚನೆ ಬಳಸಲಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.
ಸಚಿವ ಚಲುವರಾಯಸ್ವಾಮಿ ಅವರ 100 ಕೋಟಿ ರೂ. ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದಾಗಿ ಸುರೇಶ್‌ಗೌಡ ಆರೋಪಿಸಿರುವ ಸಂಬಂಧ ವಿವಿಧ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅದರ ಆಧಾರದಲ್ಲಿ ಚಲುವರಾಯಸ್ವಾಮಿ ಅವರು ಸುರೇಶ್ ಗೌಡ ವಿರುದ್ಧ ಮಾನ ನಷ್ಟ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.