ಕರ್ನಾಟಕ

karnataka

ETV Bharat / state

ಹಳೆಯ ಕಹಿ ಘಟನೆಗಳನ್ನ ಮರೆತು ಒಗ್ಗಟ್ಟಾಗಿ ಕೆಲಸ ಮಾಡಿ: ಕಾರ್ಯಕರ್ತರಿಗೆ ಹೆಚ್.ಡಿ.ದೇವೇಗೌಡ ಕರೆ - BJP JDS Meeting - BJP JDS MEETING

ಬೆಂಗಳೂರಿನ ಅರಮನೆ ರಸ್ತೆಯ ಖಾಸಗಿ ಹೋಟೆಲ್​ನಲ್ಲಿ ಬಿಜೆಪಿ - ಜೆಡಿಎಸ್ ಸಮನ್ವಯ ಸಭೆ ನಡೆಯಿತು.

hd-deve-gowda
ಹಳೆಯ ಕಹಿ ಘಟನೆ ಮರೆತು ಒಗ್ಗಟ್ಟಾಗಿ ಕೆಲಸ ಮಾಡಿ: ಕಾರ್ಯಕರ್ತರಿಗೆ ಹೆಚ್.ಡಿ.ದೇವೇಗೌಡ ಕರೆ

By ETV Bharat Karnataka Team

Published : Mar 29, 2024, 3:38 PM IST

ಬೆಂಗಳೂರು: ''ಈ ಹೊಸ ಮೈತ್ರಿಗೆ ತನ್ನದೇ ಆದ ಸಾಮರ್ಥ್ಯ ಇದೆ, ಪ್ರತಿ ಕ್ಷೇತ್ರಗಳಲ್ಲೂ ಸ್ವಂತ ಬಲ ಇದೆ. ದೇಶದಲ್ಲಿ ಮೋದಿ ಅವರಂತಹ ನಾಯಕ ಮತ್ತೊಬ್ಬರು ಇಲ್ಲ. ಹಾಗಾಗಿ, ನಮ್ಮ ಕಾರ್ಯಕರ್ತರು ಹಳೆಯ ಘಟನೆಗಳನ್ನು ಮರೆತು, ಒಟ್ಟಾಗಿ ಕೆಲಸ ಮಾಡಬೇಕು'' ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಕರೆ ನೀಡಿದ್ದಾರೆ.

ಜೆಪಿ-ಜೆಡಿಎಸ್ ಸಮನ್ವಯ ಸಭೆ

ಅರಮನೆ ರಸ್ತೆಯ ಖಾಸಗಿ ಹೋಟೆಲ್​ನಲ್ಲಿ ನಡೆದ ಬಿಜೆಪಿ - ಜೆಡಿಎಸ್ ಸಮನ್ವಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ''ಹಲವು ಕ್ಷೇತ್ರಗಳಲ್ಲಿ ನಮ್ಮ ಪರ ವಾತಾವರಣ ಇದೆ. ಸಮಯ ಕಡಿಮೆ ಇದ್ದು, ಕೆಲಸ ಮಾಡಿ ಎಲ್ಲ ಕ್ಷೇತ್ರಗಳನ್ನೂ ಗೆಲ್ಲಿಸಿ. ಹಳೆಯದನ್ನು ಮರೆಯಿರಿ, ಕಳೆದ 60 ವರ್ಷದ ಹಿಂದೆ ಬೆಂಗಳೂರಿನಲ್ಲಿ ಭೂಮಿ ಬೆಲೆ ಎಷ್ಟಿತ್ತು? ಈಗ ಎಷ್ಟಿದೆ? ಕಾಂಗ್ರೆಸ್ ಬಳಿ ಸಂಪನ್ಮೂಲ ಹೆಚ್ಚಾಗಿದೆ. ಚುನಾವಣೆಯಲ್ಲಿ ಅವರು ಎಷ್ಟು ಹಣ ಸುರಿಯುತ್ತಿದ್ದಾರೆ? ಅವರು ಸಂಪನ್ಮೂಲ ಸಂಗ್ರಹ ಮಾಡಿರುವುದೇ ಅಕ್ರಮ ಮಾರ್ಗದಲ್ಲಿ'' ಎಂದು ಆರೋಪಿಸಿದರು.

ಜೆಪಿ-ಜೆಡಿಎಸ್ ಸಮನ್ವಯ ಸಭೆ

ಕಾಂಗ್ರೆಸ್​ ವಿರುದ್ಧ ಆರೋಪ: ''ಕಾಂಗ್ರೆಸ್​ನವರು ಬೇರೆ ರಾಜ್ಯಗಳಿಗೂ ಹಣ ಸಾಗಿಸಿದರು. ಆದರೂ ಸೋಕಾಲ್ಡ್ ಕಾಂಗ್ರೆಸ್ ನಾಲ್ಕು ರಾಜ್ಯಗಳಲ್ಲಿ ಚುನಾವಣೆ ಸೋತಿದೆ. ಈ ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಸಬಹುದು, ಹಣ ಸುರಿಯುವ ಕಾಂಗ್ರೆಸ್ ಸೋಲಿಸುವುದು ಸುಲಭವಲ್ಲ. ಆದರೆ, ಜನ ನಮ್ಮ ಪರ ಇದ್ದಾರೆ. ಎಲ್ಲ 28 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಹಣ ಬಲದ ವಿರುದ್ಧ ನಾವು ಚಾಲೆಂಜ್​​​​ ಮಾಡಬೇಕಿದೆ. ಹೊರ ರಾಜ್ಯಕ್ಕೂ ಕಾಂಗ್ರೆಸ್​​ನವರು ಹಣ ಸರಬರಾಜು ಮಾಡುತ್ತಿದ್ದಾರೆ. ತೆಲಂಗಾಣ, ಕರ್ನಾಟಕ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಕರ್ನಾಟಕದಿಂದ ಎಐಸಿಸಿಗೆ ಹಣ ಸಂದಾಯವಾಗುತ್ತಿದೆ. ಕರ್ನಾಟಕದ ಎಲ್ಲಾ ಅಭ್ಯರ್ಥಿಗಳಿಗೂ ಮೋದಿ ಹಣ ಕಳುಹಿಸಲು ಸಾಧ್ಯವಿಲ್ಲ'' ಎಂದರು.

''ಸಿದ್ದರಾಮಯ್ಯ ಅವರು ಜೆಡಿಎಸ್ ಎಲ್ಲಿದೆ ಅಂತಾರೆ. ಅವರಿಗೆ ಅಧಿಕಾರದ ಮದ. ಆದರೆ, ಜೆಡಿಎಸ್ ಎಲ್ಲಿದೆ ಎಂದು ತೋರಿಸುವ ಸಾಮರ್ಥ್ಯ 91 ವರ್ಷದ ಈ ದೇವೇಗೌಡನಿಗಿದೆ. ಯಾರಿಗೂ ನಾನು ಅಂಜುವನಲ್ಲ. ಭಯ ಅನ್ನೋದೇ ನನಗಿಲ್ಲ'' ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಗುಡುಗಿದರು.

ಮೋದಿಯೇ ಟ್ರಂಪ್ ಕಾರ್ಡ್: ''ಪರಸ್ಪರ ಸಹಕಾರ, ಒಗ್ಗಟ್ಟಿಗೆ ಯಡಿಯೂರಪ್ಪ ಪಾತ್ರ ಮುಖ್ಯವಾಗಿದೆ. ಕಾಲ ಕ್ಷಣಿಕ. ನಮ್ಮ ವಿರೋಧಿಗಳು ಪ್ರಬಲರಾಗಿದ್ದಾರೆ. ಹಿಂದೆ ಆಗಿರುವ ಲೋಪಗಳನ್ನು ಸರಿಪಡಿಸಿಕೊಂಡು ಮುಂದುವರೆಯೋಣ. ಮೋದಿಯವರ ಜೊತೆ ಕೈಜೋಡಿಸಲು ಹಲವು ಕಾರಣಗಳಿವೆ. 60 ವರ್ಷ ಸಾರ್ವಜನಿಕ ಜೀವನದಲ್ಲಿ ಹೋರಾಟ ಮಾಡಿದ್ದೇನೆ. ನನಗೆ ಎಲ್ಲದರ ಅರಿವು ಇದೆ. ಮೋದಿ ಹೆಸರು ಮಾತ್ರವೇ ಈ ಚುನಾವಣೆಯಲ್ಲಿ ಟ್ರಂಪ್ ಕಾರ್ಡ್ ಆಗಿದೆ. ಒಟ್ಟಾಗಿ ಕೆಲಸ ಮಾಡಬೇಕು'' ಎಂದು ತಿಳಿಸಿದರು.

''ನನ್ನದು ಎನ್‌ಸೈಕ್ಲೋಪೀಡಿಯಾ. ಯಾವಾಗ, ಏನೆಲ್ಲಾ ಘಟನೆ ನಡೆದಿದೆ ಎಲ್ಲವನ್ನೂ ಹೇಳಬಲ್ಲೆ. ಯಡಿಯೂರಪ್ಪ ಅವರೇ.. ನನಗೆ ಎಲ್ಲಾ ಗೊತ್ತು ಎಂದ ದೇವೇಗೌಡರು, ರಾಹುಲ್ ಗಾಂಧಿಯಿಂದ ಹಿಡಿದು ಎಲ್ಲರ ವಿಚಾರ ಗೊತ್ತು. ನನ್ನನ್ನು ತುಮಕೂರಿಗೆ ಕಳಿಸಿ, ನನ್ನನ್ನೇ ಸೋಲಿಸಿದರು. ಕಾಂಗ್ರೆಸ್​​​ನವರು ಏನು ಮಾಡಿದರೆಂದು ಗೊತ್ತಿದೆ'' ಎಂದು ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದರು. ''ಮೈಸೂರು - ಚಾಮರಾಜನಗರ ಕ್ಷೇತ್ರ ಗೆಲ್ಲುವ ಶಕ್ತಿ ನಿಮಗೆ ಇದೆ. ಜಿಟಿ ದೇವೇಗೌಡರೇ.. ಸಿದ್ದರಾಮಯ್ಯ ಅವರ ಗರ್ವಭಂಗ ಆಗಬೇಕು. ಅದಾಗಬೇಕಾದರೆ ನಾವೆಲ್ಲರೂ ಛಲದಿಂದ ಒಟ್ಟಾಗಿ ಹೋಗಬೇಕು'' ಎಂದು ವೇದಿಕೆಯಲ್ಲೇ ಜೆಟಿಡಿಗೆ ಕರೆ ಕೊಟ್ಟರು.

''ಕ್ಷೇತ್ರಗಳಿಗೆ ಬಂದು ಭಾಷಣ ಮಾಡುವ ಶಕ್ತಿ ನನಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಅಶೋಕ್‌ಗೆ ಉಸ್ತುವಾರಿ ನೀಡಿ, ಒಬ್ಬ ಸಾಮಾನ್ಯ ಕಾರ್ಯಕರ್ತರನ್ನೂ ಬಿಡದೆ ಹೋರಾಟ ಮಾಡೋಣ. ಒಂದು ರಾಜ್ಯದ ಸಿಎಂ ಗಟ್ಟಿಯಾಗಿರಬೇಕಂತೆ, ದೇಶದ ಪ್ರಧಾನಿ ಬಹಳ ವೀಕ್ ಆಗಿರಬೇಕಂತೆ. ಅಬ್ಬಾ.. ಪ್ರಧಾನಿ ವಿರುದ್ಧ ಕೋರ್ಟಿಗೆ ಹೋಗಿದ್ದಾರೆ. ಅಂತ ನಸುನಕ್ಕ ದೇವೇಗೌಡರು, ರೈತರ ಸಾಲದ ಮೇಲೆ ಬಡ್ಡಿ ಮನ್ನಾ ಮಾಡಿ ಅಂದರೆ ಮನಮೋಹನ್ ಸಿಂಗ್ ನೋ.. ಅಂದರು. ಇದೆಲ್ಲಾ ಗೊತ್ತಿದ್ದರೂ, ಸಿದ್ದರಾಮಯ್ಯ ಅವರೇ ಕೋರ್ಟಿಗೆ ಅರ್ಜಿ ಹಾಕ್ತೀರಾ? ಇಂತಹ ಮುಖ್ಯಮಂತ್ರಿ ನಮ್ಮ ರಾಜ್ಯದಲ್ಲಿದ್ದಾರೆ. ಆ ಮಹಾನುಭಾವರಿಗೆ ನಮೋ ನಮಃ'' ಎಂದು ವ್ಯಂಗ್ಯವಾಡಿದರು.

ನಾವೆಲ್ಲ ಒಂದೇ ತಾಯಿಯ ಮಕ್ಕಳಂತೆ: ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಮಾತನಾಡಿ, ''ದೇವೇಗೌಡರು ಈ ವಯಸ್ಸಿನಲ್ಲಿ ಇಂದು ಬಂದು ಕುಳಿತಿದ್ದಾರೆ. ಕಾಯಾ ವಾಚಾ ಮನಸಾ.. ಕೆಲಸ ಮಾಡಿದರೆ 28 ಕ್ಷೇತ್ರಗಳನ್ನೂ ಗೆಲ್ಲುತ್ತೇವೆ. ರಾಜ್ಯ ಸರ್ಕಾರದ ಬಗ್ಗೆ ಹೆಚ್ಚು ಮಾತಾಡಬೇಕಾದ ಅವಶ್ಯಕತೆ ಇಲ್ಲ. ರಾಜ್ಯದ ಖಜಾನೆ ಖಾಲಿಯಾಗಿದೆ. ಸರ್ಕಾರ ದಿವಾಳಿಯಾಗಿರುವುದಕ್ಕೆ ರೈತರಿಗೆ ಕೊಡುತ್ತಿದ್ದ 4000 ರೂ. ನಿಲ್ಲಿಸಿದ್ರಾ?. ಬಿಜೆಪಿ-ಜೆಡಿಎಸ್ ಇಂದು ಬೇರೆಯಲ್ಲ,‌ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ. ಪಣ ತೊಟ್ಟರೆ ನಮ್ಮ ಗೆಲುವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಎಲ್ಲಿದೆ? ಸುಳ್ಳು ಭರವಸೆ ಕೊಟ್ಟು, ವಂಚನೆ ಮಾಡಿ ಅಧಿಕಾರದ ಮದದಲ್ಲಿ ಮೈಮರೆಯುತ್ತಿದ್ದಾರೆ. ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಏನಾಗುತ್ತದೆ ಎಂದು ಈಗಲೇ ನಾನು ಹೇಳಲು ಇಚ್ಚೆಪಡಲ್ಲ. ಒಂದಾಗಿ, ಜೊತೆಯಾಗಿ ಹೆಜ್ಜೆ ಹಾಕೋಣ. ಮುಂದೆಯೂ ಮೈತ್ರಿ ಹೀಗೆಯೇ ಮುಂದುವರೆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ವನಾಶವಾಗಲಿದೆ'' ಎಂದು ಹೇಳಿದರು.

ಇದನ್ನೂ ಓದಿ:ಮೈತ್ರಿಧರ್ಮ ಏನು ಅನ್ನೋದನ್ನ ಕಾರ್ಯಕರ್ತರಿಗೆ ತಿಳಿಸಿಕೊಡಲಿದ್ದೇವೆ: ಹೆಚ್.ಡಿ ಕುಮಾರಸ್ವಾಮಿ - JDS and BJP meeting

ABOUT THE AUTHOR

...view details