ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ (ETV Bharat) ಹಾಸನ ಲೋಕಸಭಾ ಕ್ಷೇತ್ರ:28 ಕ್ಷೇತ್ರಗಳಲ್ಲಿ ಹೆಚ್ಚು ಗಮನ ಸೆಳೆದ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸೋಲಿನ ರುಚಿ ಕಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್ 43,739ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಹೊಳೆನರಸೀಪುರ ಪಟ್ಟಣದ ಗಾಂಧಿ ವೃತ್ತದಲ್ಲಿ ಸಂಭ್ರಮಾಚರಣೆ ನಡೆದಿದೆ.
1999ರಲ್ಲಿ ಪುಟ್ಟಸ್ವಾಮಿಗೌಡರು ದೇವೇಗೌಡರನ್ನು ಸೋಲಿಸಿದ್ದರು. 20 ವರ್ಷದ ಬಳಿಕ ಪುಟ್ಟಸ್ವಾಮಿಗೌಡ ಮೊಮ್ಮಗ ಪ್ರಜ್ವಲ್ ರೇವಣ್ಣನ ಸೋಲಿಸುವ ಮೂಲಕ ಇತಿಹಾಸ ಮರುಕಳಿಸಿದೆ.
ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಪೆನ್‌ಡ್ರೈವ್ ಹಂಚಿಕೆ ಪ್ರಕರಣದ ಪ್ರಮುಖ ಆರೋಪಿಗಳಾದ ಕಾರ್ತಿಕ್‌ಗೌಡ ಹಾಗೂ ಪುಟ್ಟರಾಜು ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಕಾರ್ತಿಕ್ ಗೌಡ ಅವರು ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ.
ಕಾಂಗ್ರೆಸ್ ಅಭ್ಯರ್ಥಿ ಗೆಲುವು:
- ಕಾಂಗ್ರೆಸ್ ಅಭ್ಯರ್ಥಿ ಎಂ. ಶ್ರೇಯಸ್ ಪಟೇಲ್ - 6,70,274 ಮತಗಳು
- ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ, ಪ್ರಜ್ವಲ್ ರೇವಣ್ಣ - 6,26,536 ಮತಗಳು
- ಅಂತರ - 43,739 ಮತಗಳು.
ರಾಜ್ಯದ 28 ಕ್ಷೇತ್ರಗಳಲ್ಲಿ ಹಾಸನ ಈ ಬಾರಿ ಅತಿ ಹೆಚ್ಚು ಗಮನ ಸೆಳೆದಿದ್ದ ಕ್ಷೇತ್ರ. ಅದಕ್ಕೆ ಕಾರಣವೂ ಉಂಟು. ಲೋಕಸಭೆ ಚುನಾವಣೆಯ ನಡುವೆ ಭಾರತ ಮಾತ್ರವಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡಿದ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಹಾಗೂ ಪೆನ್‌ಡ್ರೈವ್ ಪ್ರಕರಣದ ನಡುವೆಯೇ ಅಲ್ಲಿನ ಫಲಿತಾಂಶ ಏನಾಗಬಹುದು ಎನ್ನುವ ಕುತೂಹಲಕ್ಕೆ ಇದೀಗ ತೆರೆ ಬಿದ್ದಿದೆ.
ಹಾಸನ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳು ಮತ್ತು ಚಿಕ್ಕಮಗಳೂರಿನ ಕಡೂರು ವಿಧಾನಸಭಾ ಕ್ಷೇತ್ರ ಸೇರಿ 8 ಕ್ಷೇತ್ರಗಳು ಹಾಸನ ಲೋಕಸಭಾ ಕ್ಷೇತ್ರಕ್ಕೆ ಸೇರುತ್ತದೆ. ಕಡೂರು, ಅರಸೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಹಾಸನ, ಹೊಳೆನರಸೀಪುರ, ಶ್ರವಣಬೆಳಗೊಳ ಮತ್ತು ಅರಕಲಗೂಡಿನಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಬೇಲೂರು ಮತ್ತು ಸಕಲೇಶಪುರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.
ಅಷ್ಟೇ ಅಲ್ಲದೇ ಹಾಸನವು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರ ತವರು ಕ್ಷೇತ್ರ ಕೂಡ ಹೌದು. ಜೊತೆಗೆ ಕುಟುಂಬಕ್ಕೆ ರಾಜಕೀಯ ನೆಲೆ ಒದಗಿಸಿದ ಕ್ಷೇತ್ರ ಕೂಡ. ಎದುರಾಳಿ ಪ್ರತಿಸ್ಪರ್ಧಿ ಕಾಂಗ್ರೆಸ್ ನಾಯಕರಾದ ಜಿ. ಪುಟ್ಟಸ್ವಾಮಿಗೌಡ ಅವರ ಮೊಮ್ಮಗ ಶ್ರೇಯಸ್ ಪಟೇಲ್ ಕೂಡ ರಾಜಕೀಯ ಹಿನ್ನೆಲೆಯುಳ್ಳವರು. ಹಾಗಾಗಿ ಕ್ಷೇತ್ರ ತೀವ್ರ ಕುತೂಹಲ ಮೂಡಿಸಿತ್ತು. ಸಾಕಷ್ಟು ಹಗ್ಗಜಗ್ಗಾಟದ ನಡುವೆಯೂ ಟಿಕೆಟ್ ಪಡೆದು ಕಣಕ್ಕಿಳಿದ ಪ್ರಜ್ವಲ್ ರೇವಣ್ಣ, ಮತದಾನದ ಬಳಿಕ ಯಾವ ಪರಿಸ್ಥಿತಿ ಎದುರಿಸಿದರು ಅನ್ನೋದು ತಿಳಿದೇ ಇದೆ.
ಚುನಾವಣಾ ಘೋಷಣೆಯಾದ ದಿನದಿಂದ ಉಭಯ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಭರ್ಜರಿ ರೋಡ್ ಶೋ ನಡೆಸುವ ಮೂಲಕ ಮತದಾರರ ಗಮನ ಸೆಳೆದಿದ್ದರು. ಬಿಜೆಪಿ - ಜೆಡಿಎಸ್ ಮೈತ್ರಿಯ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಪ್ರಧಾನಿ ಮೋದಿ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆದಿಯಾಗಿ ಭರ್ಜರಿ ಪ್ರಚಾರ ನಡೆಸಿದ್ದರು. ಇತ್ತ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಆದಿಯಾಗಿ ಹಲವರು ಮತಬೇಟೆ ನಡೆಸಿದ್ದರು. ಮತಯಾಚನೆ ವೇಳೆ ಎಲ್ಲರೂ ತರಹೇವಾರಿ ಹೇಳಿಕೆಗಳನ್ನು ನೀಡುವ ಮೂಲಕ ಕ್ಷೇತ್ರದ ಜನರ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದರು.
ಮತದಾರರ ಮಾಹಿತಿ:ನಡೆದ ಚುನಾವಣೆಯಲ್ಲಿ ಸೇವಾ ಮತದಾರರು ಸೇರಿದಂತೆ ಕ್ಷೇತ್ರದ ಒಟ್ಟು 17,38,818 ಮತದಾರರಲ್ಲಿ 8,63,727 ಪುರುಷರು, 8,72,840 ಮಹಿಳೆಯರು, 43 ಇತರೆ, 2,208 ಸೇವಾ ಮತದಾರರನ್ನು ಹೊಂದಿದೆ. 2019ರಲ್ಲಿ ಚುನಾವಣೆಯಲ್ಲಿ ಶೇ. 72.13ರಷ್ಟು ಮತದಾನದ ಪ್ರಮಾಣ ದಾಖಲಾಗಿದ್ದರೆ, 2024ರ ಚುನಾವಣೆಯಲ್ಲಿ ಶೇ. 77.01ರಷ್ಟು ಮತದಾನದ ಪ್ರಮಾಣ ದಾಖಲಾಗಿತ್ತು.
ಇದನ್ನೂ ಓದಿ:ಲೋಕಸಭೆ ಚುನಾವಣೆ 2024: ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಕ್ಷಣ ಕ್ಷಣದ ಅಪ್ಡೇಟ್ - ಕಣದಲ್ಲಿರುವ ಪ್ರಮುಖರಿವರು! - Lok Sabha election results 2024