ಕರ್ನಾಟಕ

karnataka

ETV Bharat / state

ರೇಣುಕಾಸ್ವಾಮಿ ಕೊಲೆ ಪ್ರಕರಣ ದುರ್ಬಲಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ; ಎಸ್​ಪಿಪಿ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ: ಡಾ.ಜಿ.ಪರಮೇಶ್ವರ್ - Renukaswamy murder case - RENUKASWAMY MURDER CASE

''ರೇಣುಕಾಸ್ವಾಮಿ ಕೊಲೆ ಪ್ರಕರಣ ದುರ್ಬಲಗೊಳಿಸುವ ಉದ್ದೇಶ ಸರ್ಕಾರಕ್ಕಿಲ್ಲ, ಎಸ್​ಪಿಪಿ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಬದಲಾವಣೆ ಮಾಡಿದ್ರೂ ತಪ್ಪೇನಿಲ್ಲ'' ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.

Dr G Parameshwar  SPP change  Renukaswamy murder case
ಗೃಹ ಸಚಿವ ಡಾ.ಜಿ. ಪರಮೇಶ್ವರ್ (ETV Bharat)

By ETV Bharat Karnataka Team

Published : Jun 19, 2024, 1:21 PM IST

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದರು. (ETV Bharat)

ಬೆಂಗಳೂರು:''ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ದುರ್ಬಲಗೊಳಿಸುವ ಉದ್ದೇಶ ಸರ್ಕಾರಕ್ಕೆ ಇಲ್ಲ. ಯಾವ ಪ್ರಭಾವ, ಒತ್ತಡಕ್ಕೂ ಮಣಿಯದೇ ತನಿಖೆ ನಡೆಯುತ್ತಿದೆ.‌ ಎಸ್​ಪಿಪಿ ಬದಲಾವಣೆ ಆದರೆ ಅದಕ್ಕೆ ಕಾರಣ ಇರುತ್ತದೆ'' ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು ಬದಲಾವಣೆ ಬಗ್ಗೆ ಪರೋಕ್ಷವಾಗಿ ಸುಳಿವು ನೀಡಿದ್ದಾರೆ.

ಸದಾಶಿವ ನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ''ನಟ ದರ್ಶನ್ ಪ್ರಕರಣದಲ್ಲಿ ಎಸ್​ಪಿಪಿ ಪ್ರಸನ್ನಕುಮಾರ್ ಬದಲಾವಣೆ ವಿಚಾರದಲ್ಲಿ ಸರ್ಕಾರ ಮತ್ತು ಕಾನೂನು ತಜ್ಞರ ಸಲಹೆ ಮೇರೆಗೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳಾಗಲಿ ಅಥವಾ ನಾನಾಗಲಿ ಕಾನೂನು ತಜ್ಞರ ಸಲಹೆ ಪಡೆದು, ಯಾವ ಕೇಸ್​ನಲ್ಲಿ ಯಾರನ್ನು ಮಾಡಬೇಕು ಅಂತ ತೀರ್ಮಾನ ಮಾಡ್ತೀವಿ, ಮಾಡುತ್ತೇವೆ'' ಎಂದರು.

''ಎಲ್ಲರೂ ಸ್ಟ್ರಿಕ್ಟ್ ಆಗಿರಬೇಕು. ಯಾರನ್ನೇ ನೇಮಕ ಮಾಡಿಕೊಂಡರೂ, ಕಾನೂನು ಪ್ರಕಾರವೇ ಮಾಡಬೇಕು. ಲಾ ಬುಕ್ ಪ್ರಕಾರವೇ ನಡೆದುಕೊಳ್ಳಬೇಕು. ಎಸ್​ಪಿಪಿ ಬದಲಾವಣೆ ಬಗ್ಗೆ ನನಗೆ ಗೊತ್ತಿಲ್ಲ. ಯಾವುದೇ ಎಸ್​ಪಿಪಿ ಬದಲಾವಣೆ ಆಗಬೇಕಾದರೂ ಒಂದು ಕಾರಣ ಇರಲಿದೆ. ಬದಲಾವಣೆ ಮಾಡಿದ್ರೂ ತಪ್ಪೇನಿಲ್ಲ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆದಿಲ್ಲ. ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇವೆ. ಯಾರನ್ನೇ ನೇಮಕ ಮಾಡಿದರೂ ಕಾನೂನು ಪ್ರಕಾರವಾಗಿ ಮಾಡಬೇಕು. ಕಾನೂನು ದೃಷ್ಟಿಯಿಂದ ಇಟ್ಟುಕೊಂಡೇ ಮಾಡಬಹುದು'' ಎಂದು ತಿಳಿಸಿದರು.

ನಟ ದರ್ಶನ್ ತಪ್ಪೊಪ್ಪಿಗೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ ಎಂದ ಪರಮೇಶ್ವರ್, ನನಗೆ ಬರದ ಮಾಹಿತಿ, ನಿಮಗೆ ಹೇಗೆ ಬರುತ್ತದೆ. ಈ ಬಗ್ಗೆ ತನಿಖೆ ಮಾಡಬೇಕು ಅಂತ ಮಾಧ್ಯಮದವರನ್ನೇ ಪ್ರಶ್ನಿಸಿದರು. ''ದರ್ಶನ್ ಕೇಸ್​ನ್ನು ನಾವು ಯಾವುದೇ ಕಾರಣಕ್ಕೂ ಸಡಿಲ ಮಾಡಲ್ಲ. ಅಂತಹ ಚಿಂತನೆ ಕೂಡ ಸರ್ಕಾರದ ಮುಂದೆ ಇಲ್ಲ. ಈ ಕೇಸನ್ನು ಯಾವುದೇ ಮುಲಾಜು, ಒತ್ತಡ ಇಲ್ಲದೇ ವಿಚಾರಣೆ ಮಾಡ್ತಿದ್ದಾರೆ'' ಎಂದು ಹೇಳಿದರು.

ಚಿತ್ರನಟ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ ನಾಪತ್ತೆ ವಿಚಾರಕ್ಕೆ ಮಾತನಾಡಿದ ಪರಮೇಶ್ವರ್, ''ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಇದು ಹೊಸದಾಗಿ ಬಂದಿರುವ ವಿಚಾರ. ಈ ಬಗ್ಗೆ ಪೊಲೀಸರು ಪರಿಶೀಲನೆ ಮಾಡ್ತಾರೆ'' ಎಂದರು. ಮತ್ತೊಬ್ಬ ಮ್ಯಾನೇಜರ್ ಆನೇಕಲ್‌ನಲ್ಲಿ ಆತ್ಮಹತ್ಯೆ ಪ್ರಕರಣ ವಿಚಾರಕ್ಕೆ ಮತ್ತು ಈ ಕೇಸಿಗೆ ಸಂಬಂಧ‌ ಇದ್ದರೆ ಎಸ್​ಐಟಿ ವಿಚಾರಣೆ ಮಾಡುತ್ತದೆ. ದರ್ಶನ್ ಇದರಲ್ಲಿ ಭಾಗಿಯಾಗಿದ್ದರೆ, ಅದಕ್ಕೆ ಸರ್ಕಾರ ಕೂಡ ತನಿಖೆಗೆ ಅನುಮತಿ ಕೊಡಲಿದೆ. ಏನು‌ ಕ್ರಮ ತೆಗೆದುಕೊಳ್ಳಬೇಕೋ ಅದನ್ನು ಮಾಡುತ್ತೇವೆ'' ಎಂದು ಉತ್ತರಿಸಿದರು.

ಬಿಜೆಪಿಯಿಂದ ನಾಳೆ ಸಿಎಂಗೆ ಘೇರಾವ್ ವಿಚಾರ:ಬಿಜೆಪಿ ನಾಳೆ ರಸ್ತೆ ತಡೆ, ಸಿಎಂಗೆ ಘೇರಾವ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ''ಲಾಠಿ ಚಾರ್ಜ್ ಮಾಡಬೇಕು ಅಂದ್ರೆ ಮಾಡ್ತೀವಿ. ಪೊಲೀಸರ ಅನುಮತಿ ಪಡೆದು ಮಾಡಿದ್ರೆ ಸಮಂಜಸವಾಗಿರುತ್ತದೆ. ಇಲ್ಲದಿದ್ರೆ ಕಾನೂನು ಕ್ರಮ ಆಗಲಿದೆ. ಸುಪ್ರೀಂ ಕೋರ್ಟ್ ಕೂಡ ರಸ್ತೆ ತಡೆ ಮಾಡುವಂತಿಲ್ಲ ಅಂತ ಹೇಳಿದೆ. ಅವರು ಈಗಾಗಲೇ ಫ್ರೀಡಂ ಪಾರ್ಕ್‌ ಜೊತೆಗೆ ಪ್ರತಿಯೊಂದು ಜಿಲ್ಲೆಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಈಗ ಮತ್ತೆ ರಸ್ತೆಗೆ ಇಳಿದರೆ, ಕಾನೂನಿನ‌ ಪ್ರಕಾರ ಏನು ಮಾಡಬೇಕೋ ಮಾಡ್ತೀವಿ'' ಎಂದು ಹೇಳಿದರು.

ಪೆಟ್ರೋಲ್, ಡೀಸೆಲ್ ದರ ಇಳಿಕೆ ಮಾಡುತ್ತಿರಾ ಎಂಬ ವಿಚಾರಕ್ಕೆ, ''ಈಗಾಗಲೇ ದರ ಹೆಚ್ಚಳ ಆದೇಶ ಹೊರಡಿಸಿದ್ದೇವೆ. ಜನರೂ ಕೂಡ ಪೆಟ್ರೋಲ್, ಡೀಸೆಲ್ ಹಾಕಿಸಿಕೊಳ್ತಿದ್ದಾರೆ‌. ನೆರೆಯ ರಾಜ್ಯದವರು ಕಡಿಮೆ ದರ ಇದೆ ಅಂತ ಇಲ್ಲಿಗೆ ಬಂದು ಪೆಟ್ರೋಲ್ ಹಾಕಿಸಿಕೊಳ್ತಿದ್ದಾರೆ. ನೀರು, ಬಸ್ ದರ ಏರಿಕೆ ವಿಚಾರದಲ್ಲಿ ಆಯಾ ಇಲಾಖೆಗೆ ಬರಲಿದೆ. ಇಲಾಖೆ ಸಚಿವರು ಗಮನಿಸ್ತಾರೆ'' ಎಂದರು. ವಾಲ್ಮೀಕಿ ನಿಗಮದಲ್ಲಿ ಸಿಎಂ ಸಿದ್ದರಾಮಯ್ಯ ಹಸ್ತಕ್ಷೇಪ ವಿಚಾರಕ್ಕೆ ಮಾತನಾಡಿದ ಸಚಿವರು, ''ಅದನ್ನು ಬಿಜೆಪಿಯವರು ಪ್ರೂವ್ ಮಾಡಲಿ. ಸಿಬಿಐಗೆ ಕೊಡಿ ಅಂತ‌ ಕೂಗಾಡ್ತಿದ್ರು. ಈಗ ಸಿಬಿಐ ಕೂಡ ಎಂಟ್ರಿಯಾಗಿದೆ. ಬ್ಯಾಂಕ್ ಫ್ರಾಡ್ ಅನ್ನೋ ಕಾರಣಕ್ಕೆ ಸಿಬಿಐ ಕೂಡ ಎಂಟ್ರಿಯಾಗಿದೆ. ಪ್ರಕರಣ ತನಿಖೆ ನಡೆಯುತ್ತಿದೆ'' ಎಂದು ತಿಳಿಸಿದರು.

ಇದನ್ನೂ ಓದಿ:ಶಾಕ್​​​, ಗಾಯಗಳ ಆಂತರಿಕ‌ ರಕ್ತಸ್ರಾವದಿಂದ ರೇಣುಕಾಸ್ವಾಮಿ ಸಾವು: ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸತ್ಯ ಬಹಿರಂಗ - Renuka Swamy Postmortem Report

ABOUT THE AUTHOR

...view details