ಬೆಳಗಾವಿ: ಶ್ರೀಕ್ಷೇತ್ರ ಸವದತ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಹನ್ನೆರೆಡು ತಿಂಗಳೂ ಜಾತ್ರಾ ವೈಭವದ ಕಳೆ. ಅದರಲ್ಲಿಯೂ ಬನದ ಹುಣ್ಣಿಮೆಯಿಂದ ಭಾರತ ಹುಣ್ಣಿಮೆವರೆಗಂತೂ ಭಕ್ತಸಾಗರ. ಆದಿಶಕ್ತಿ ಯಲ್ಲಮ್ಮನ ಈ ಜಾತ್ರಾ ವೈಭವಕ್ಕೆ ಭಂಡಾರದಷ್ಟೇ ಕಳೆಕಟ್ಟುವುದು ಬಳೆಗಳು. ಭಾರತ ಹುಣ್ಣಿಮೆಗೆ ಮುತ್ತೈದೆ ಹುಣ್ಣಿಮೆ ಅಂತಲೂ ಕರೆಯುತ್ತಾರೆ. ಹೇಗಿದೆ ಬಳೆ ವ್ಯಾಪಾರ? ಏನಂತಾರೆ ವ್ಯಾಪಾರಸ್ಥರು ನೋಡೋಣ ಬನ್ನಿ.
ಯಲ್ಲಮ್ಮ ಗುಡ್ಡದ ಜಾತ್ರೆಯಲ್ಲಿ ಮುತ್ತೈದೆ ಭಾಗ್ಯದ ಸಂಕೇತವಾದ ಬಳೆಗಳ ಮಾರಾಟ ಭರ್ಜರಿಯಾಗಿಯೇ ನಡೆಯುವುದು ವಿಶೇಷ. ಗುಡ್ಡಕ್ಕೆ ಬರುವ ಪ್ರತಿಯೊಬ್ಬ ಹೆಣ್ಣುಮಕ್ಕಳೂ ಅಬಾಲ ವೃದ್ಧರಾಧಿಯಾಗಿ ಬಳೆ ಇಟ್ಟುಕೊಂಡು ಸಂಭ್ರಮಿಸುವ ಪರಿ ವರ್ಣಿಸಲಸಾಧ್ಯ. ಭಾರತ ಹುಣ್ಣಿಮೆ ಜಾತ್ರೆಗೆ ಆಗಮಿಸುವ ಮಹಿಳಾ ಭಕ್ತರು ದೇವಿ ದರ್ಶನ, ಪೂಜೆ, ನೈವೇದ್ಯ ಸಮರ್ಪಿಸಿದ ನಂತರ ಬಳೆ ಇಟ್ಟುಕೊಂಡು ಮನೆಗೆ ತೆರಳುವುದು ವಾಡಿಕೆ. ಇದು ಅನಾದಿ ಕಾಲದಿಂದಲೂ ಬಂದ ವಾಡಿಕೆ. ಹೀಗಾಗಿ, ಒಬ್ಬೊಬ್ಬ ಮಹಿಳೆ ತಮಗಿಷ್ಟದ ಬಳೆಗಳನ್ನು ಇಟ್ಟುಕೊಂಡು ಸಂಭ್ರಮಿಸುತ್ತಾರೆ.
ಬಣ್ಣ ಬಣ್ಣದ ಬಳೆಗಳ ಸೊಬಗು:ಸವದತ್ತಿ ಯಲ್ಲಮ್ಮ ಜಾತ್ರಾ ವೈಭವವೇ ಹಾಗೆ. ಎಲ್ಲಿ ನೋಡಿದರೂ ಜನಜಾತ್ರೆ. ಜಾತ್ರೆಗೆ ಕಳೆಕಟ್ಟಿದ ಅಂಗಡಿಗಳಲ್ಲಿ ಕಣ್ಮನ ಸೆಳೆಯುವ ಅರಿಷಿನ-ಕುಂಕುಮದಂತೆ ಬಣ್ಣ ಬಣ್ಣದ ಬಳೆಗಳೂ ಸೊಬಗನ್ನು ನೋಡಲು ಎರಡು ಕಣ್ಣು ಸಾಲುವುದಿಲ್ಲ.
ಒಬ್ಬೊಬ್ಬ ಮಹಿಳೆಯರು ಎರಡೂ ಕೈಗಳಲ್ಲಿ ಡಜನ್‌ಗಟ್ಟಲೆ ಬಳೆ ಇಟ್ಟುಕೊಳ್ಳುತ್ತಾರೆ. ಒಬ್ಬೊಬ್ಬರು ಎರಡ್ಮೂರು ಡಜನ್ ಬಳೆ ಇಟ್ಟುಕೊಳ್ಳುವುದನ್ನು ಕಾಣಬಹುದು.
ಭರ್ಜರಿ ವ್ಯಾಪಾರ:ಯಲ್ಲಮ್ಮ ಜಾತ್ರೆ ಹಿನ್ನೆಲೆಯಲ್ಲಿ ಸುಮಾರು ನೂರಕ್ಕೂ ಅಧಿಕ ಬಳೆಗಳ ಅಂಗಡಿಗಳಿದ್ದು, ಒಂದೊಂದು ಅಂಗಡಿಯಲ್ಲಿಯೂ ಹಗಲು ರಾತ್ರಿ ಎನ್ನದೇ ಜನಜಂಗುಳಿ ಕಂಡು ಬರುವುದು ವಿಶೇಷ. ಸರಿಸುಮಾರು 45ಕ್ಕೂ ಹೆಚ್ಚು ದಿನಗಳ ಕಾಲ ಸತತವಾಗಿ ನಡೆಯುವ ರೇಣುಕಾ ಯಲ್ಲಮ್ಮನ ಜಾತ್ರೆಯಲ್ಲಿ ಬಳೆಗಳ ವ್ಯಾಪಾರ ಭರ್ಜರಿಯಾಗಿ ನಡೆಯುತ್ತದೆ. ಪ್ರತಿ ದಿನಕ್ಕೆ ಒಂದೊಂದು ಅಂಗಡಿಯಲ್ಲಿ ಸುಮಾರು 10ರಿಂದ 20 ಸಾವಿರ ರೂ.ಗಳವರೆಗೆ ವ್ಯಾಪಾರ ವಹಿವಾಟು ನಡೆಯುತ್ತದೆ ಎಂದರೆ ಬಳೆಗಳ ಮಹತ್ವ ಹೇಗಿದೆ ಎಂಬುದು ಗೊತ್ತಾಗುತ್ತದೆ.
ಕೋಟಿ ರೂ.ಗಳ ವಹಿವಾಟು:ಜನವರಿಯ ಬನದ ಹುಣ್ಣೆಮೆಯಿಂದ ಫೆಬ್ರವರಿ ತಿಂಗಳ ಭಾರತ ಹುಣ್ಣಿಮೆಯವರೆಗೆ ಹಾಗೂ ದವದ ಹುಣ್ಣಿಮೆ ಸೇರಿದಂತೆ ನಿರಂತರವಾಗಿ ನಡೆಯುವ ರೇಣುಕಾ ಯಲ್ಲಮ್ಮಳ ಸನ್ನಿಧಿಗೆ ಬರುವ ಪ್ರತಿಯೊಬ್ಬ ಮಹಿಳೆಯರೂ ಬಳೆ ಇಟ್ಟುಕೊಳ್ಳುವುದರಿಂದ ಬಳೆಗಳ ಮಾರಾಟ ಭರ್ಜರಿಯಾಗಿ ನಡೆಯುತ್ತದೆ. ಒಟ್ಟಾರೆಯಾಗಿ, ಈ ಜಾತ್ರೆಯಲ್ಲಿ ಸರಿಸುಮಾರು ಮೂರು ಕೋಟಿ ರೂ.ಗಳವರೆಗೆ ಬಳೆಗಳ ವ್ಯಾಪಾರ ವಹಿವಾಟು ನಡೆಯುತ್ತದೆ ಎನ್ನುತ್ತಾರೆ ಬಳೆ ವ್ಯಾಪಾರಿಗಳು.
ಜಾತ್ರೆ-ಬಳೆ ವ್ಯಾಪಾರಕ್ಕೆ ಅಡ್ಡಿಯಾಗದ ಧರ್ಮ:ಜಾತ್ರೆಗೆ ಬರುವ ಮಹಿಳೆಯರು ಬಳೆ ಇಟ್ಟುಕೊಂಡೇ ಮನೆಗೆ ತೆರಳುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇದರಲ್ಲಿ ಮುಸ್ಲಿಂ ವ್ಯಾಪಾರಿಗಳೂ ಅಧಿಕವಾಗಿದ್ದಾರೆ. ಇಲ್ಲಿ ಯಾವುದೇ ಜಾತಿ, ಮತ, ಪಂಥ ಅಡ್ಡಿಯಾಗುವುದಿಲ್ಲ. ಸಂಪ್ರದಾಯದ ಈ ಜಾತ್ರಾ ವೈಭವಕ್ಕೆ ಸಾಮರಸ್ಯದ ಬದುಕೂ ಇಲ್ಲಿ ಥಳಕು ಹಾಕಿಕೊಂಡಿದೆ. ಹೀಗಾಗಿ, ಮಹಿಳೆಯರು ಭಕ್ತಿ ಭಾವದಿಂದ ಹೇಗೆ ಬಳೆ ಇಟ್ಟುಕೊಂಡು ಸಂಭ್ರಮಿಸುತ್ತಾರೋ, ಹಾಗೆಯೇ ಮುಸ್ಲಿಂ ಸಮುದಾಯದ ವ್ಯಾಪಾರಿಗಳೂ ಅಷ್ಟೇ ಶ್ರದ್ಧೆಯಿಂದ ಬಳೆಗಳನ್ನು ಮಾರಿ ಸಂತಸಪಡುತ್ತಾರೆ.