ಹಾವೇರಿ:''ನನಗೆ ಟಿಕೆಟ್ ಕೊಡಲೇಬೇಕು. ನಾವು ಶಾಸಕ ಸ್ಥಾನ ತ್ಯಾಗ ಮಾಡಿ ಬಿಜೆಪಿಗೆ ಬಂದವರು, ನಮ್ಮಿಂದ ಸರ್ಕಾರ ರಚನೆಯಾಗಿ ನಾಲ್ಕು ವರ್ಷ ಇತ್ತು. ಇದೀಗ ನಾವು ಮನೆಯಲ್ಲಿ ಕೂತುಕೊಂಡಿದ್ದೇವೆ. ಪಕ್ಷ ನಮಗೆ ಎಂಪಿ ಟಿಕೆಟ್ ನೀಡಬೇಕು'' ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಆಗ್ರಹಿಸಿದ್ದಾರೆ.
ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಮಾಧ್ಯಮದವದೊಂದಿಗೆ ಮಾತನಾಡಿದ ಅವರು, ''ಟಿಕೆಟ್ಗಾಗಿ ನಮಗೆ ಹೆದರಿಸೋದು, ಬೆದರಿಸೋದು ಗೊತ್ತಿಲ್ಲ. ಆದರೆ, ಸೈಲೆಂಟ್ ಇದ್ದೇವೆ ಎಂದರೆ ಅದು ನಮ್ಮ ದೌರ್ಬಲ್ಯ ಅಂತ ಭಾವಿಸಬಾರದು'' ಎಂದು ಪಾಟೀಲ್ ಹೇಳಿದರು.
''ಈಗಾಗಲೇ ಬೊಮ್ಮಾಯಿ ಸಿಎಂ ಆಗಿದ್ದಾರೆ, ನಾನು ಹಾವೇರಿ ಗದಗ ಜಿಲ್ಲೆಗಳ ಉಸ್ತುವಾರಿ ಆಗಿ ಕೆಲಸ ಮಾಡಿದ್ದೇನೆ. ನನಗೆ ಹಾವೇರಿ ಲೋಕಸಭಾ ಟಿಕೆಟ್ ಕೊಡಬೇಕು. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇನೆ. ಆದರೆ, ನಾನು ಟಿಕೆಟ್ ಬೆನ್ನತ್ತಿಕೊಂಡು ಹೋಗುವನಲ್ಲ. ಕೇಂದ್ರ ನಾಯಕರನ್ನು ಭೇಟಿ ಮಾಡಿಲ್ಲ. ನನಗೆ ಕೊಡಬೇಕು ಅಂತ ವಾದ ಮಾಡುತ್ತಿದ್ದೇನೆ'' ಎಂದು ತಿಳಿಸಿದರು.
''ಟಿಕೆಟ್ ಸಿಗಲಿಲ್ಲವೆಂದರೆ ಮುಂದಿನ ನಡೆ ಬಗ್ಗೆ ಕಾರ್ಯಕರ್ತರ ಜೊತೆ ಮಾತನಾಡುತ್ತೇನೆ. ನನಗೆ ನನ್ನದೇ ಆದ ಹಾದಿ ಇದೆ, ನಾನು ನಡೆದಿದ್ದೇ ದಾರಿ. ನನಗೆ ಹೆಬ್ಬಾರ್, ಶೇಖರ್ ಹಾದಿ ಬೇಕಾಗಿಲ್ಲ. ಕೃಷಿ ಸಚಿವನಾಗಿ ರೈತರ ಹಿತ ಕಾದಿದ್ದೇವೆ. ಕಾಂತೇಶ್ ಅವರ ಬಗ್ಗೆ ಮಾತನಾಡಲು ಹೋಗಲ್ಲ. ಕಾಂತೇಶ್ಗೂ ನನಗೂ ಸಂಬಂಧ ಇಲ್ಲ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಡಿಯೂರಪ್ಪನವರೇ ಕಾಂತೇಶ್ ಜೊತೆ ನಿಂತು ಗೆಲ್ಲಿಸಿಕೊಂಡು ಬರುವುದಾಗಿ ಮಾತುಕೊಟ್ಟಿದ್ದಾರೆ ಎಂಬ ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ''ಆ ಮಾತು ಈಶ್ವರಪ್ಪ ಅಲ್ಲ, ಯಡಿಯೂರಪ್ಪನವರೇ ಹೇಳಬೇಕಲ್ವಾ? ಅವರು ಹೇಳಿದರೆ ಆ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ. ನಮಗೆ ಈ ಬಗ್ಗೆ ಯಡಿಯೂರಪ್ಪ ಏನೂ ಹೇಳಿಲ್ಲ. ನಾನು ಸೋತಿದ್ದೀನಿ, ಅವಕಾಶ ಕೊಟ್ಟರೆ ಗೆಲ್ಲುತ್ತೇನೆ ಅಂತ ಕೇಳಿದ್ದೇನೆ ಎಂದರು.
''ಕಾಂತೇಶ್ ಇಲ್ಲವೇ ಬೊಮ್ಮಾಯಿ ಅವರಿಗೆ ಟಿಕೆಟ್ ಕೊಟ್ಟರೆ ಮುಂದೆ ವಿಚಾರ ಮಾಡುತ್ತೇನೆ. ಅಭ್ಯರ್ಥಿಯು ಹಾವೇರಿ-ಗದಗದವರೇ ಆಗಬೇಕಲ್ವಾ?'' ಎಂದ ಬಿ.ಸಿ.ಪಾಟೀಲ್, ''ನಾನು ಎಲ್ಲಾ ಹೇಳಿದರೆ ನಿಮಗೆ ರುಚಿ ಉಳಿಯಲ್ಲ, ನಾನು ಎಚ್ಚರಿಕೆ ಕೊಡುತ್ತಿಲ್ಲ. ಟಿಕೆಟ್ ಕೊಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದೇನೆ. ಒಬ್ಬ ಗ್ರಾಮ ಪಂಚಾಯತಿ ಸದಸ್ಯ ಕೂಡ ತನ್ನ ಸ್ಥಾನ ತ್ಯಾಗ ಮಾಡಲ್ಲ, ನಾವು ತ್ಯಾಗ ಮಾಡಿದ್ದೇವೆ. ನಮಗೆ ಕೊಡುವುದರಲ್ಲಿ ನ್ಯಾಯ ಇದೆ'' ಎಂದು ಪಾಟೀಲ್ ತಿಳಿಸಿದರು.
''ನಮ್ಮ ತ್ಯಾಗಕ್ಕೆ ಸರ್ಕಾರ ರಚನೆ ಆಯಿತು. 2023ರಲ್ಲಿ ಬಿಜೆಪಿ ಯಾಕೆ ಸೋತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನಾವೆಲ್ಲ ಸೋತಿದ್ದೇವೆ, ನಮ್ಮ ಹಿತವನ್ನೂ ಅವರು ಕಾಯಲಿ. ಅದರ ಜವಾಬ್ದಾರಿ ಅವರಿಗೆ ಇದೆ ಅಲ್ವಾ?'' ಎಂದರು.
ಶಿವಮೊಗ್ಗದಲ್ಲಿ ಕಾಂತೇಶ್ ಹೇಳಿಕೆ:ಹಾವೇರಿ-ಗದಗ ಲೋಕಸಭೆ ಟಿಕೆಟ್ ಬಗ್ಗೆ ಶುಕ್ರವಾರ ಶಿವಮೊಗ್ಗದಲ್ಲಿ ಮಾತನಾಡಿದ್ದ ಆಕಾಂಕ್ಷಿ ಕೆ.ಈ.ಕಾಂತೇಶ್, ''ನನಗೆ ನೂರಕ್ಕೆ ನೂರರಷ್ಟು ಟಿಕೆಟ್ ಸಿಗುವ ವಿಶ್ವಾಸವಿದೆ. ಎರಡ್ಮೂರು ದಿನಗಳಿಂದ ಮಾಧ್ಯಮಗಳ ವರದಿ ನೋಡಿ ಕಾರ್ಯಕರ್ತರು ಹಾಗೂ ಹಿತೈಷಿಗಳಿಗೆ ಸ್ವಲ್ಪ ಆಂತಕ ಮೂಡಿದೆ. ಕ್ಷೇತ್ರದ ಟಿಕೆಟ್ ಬಗ್ಗೆ ಅನೇಕ ಹೆಸರುಗಳು ಕೇಳಿಬಂದಿರುವುದರಿಂದ ಸ್ವಲ್ಪ ಗೊಂದಲಕ್ಕೊಳಗಾಗಿದ್ದಾರೆ'' ಎಂದಿದ್ದರು.
''ಕಳೆದ 10 ತಿಂಗಳ ಹಿಂದೆ ನಾನು, ನಮ್ಮ ತಂದೆ ಈಶ್ವರಪ್ಪನವರು ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಮನವಿ ಮಾಡಿದಾಗ ಅವರು ನನಗೆ ಪೂರ್ಣವಾದ ಆಶೀರ್ವಾದ ಮಾಡಿದ್ದಾರೆ. ಹಾವೇರಿ-ಗದಗ ಟಿಕೆಟ್ ಕೊಡಿಸುವುದಾಗಿ ಹಾಗೂ ಪ್ರಚಾರಕ್ಕೆ ಬಂದು ಗೆಲ್ಲಿಸಿಕೊಡುವುದಾಗಿ ತಿಳಿಸಿದ್ದಾರೆ. ಯಡಿಯೂರಪ್ಪನವರೇ ಹೀಗೆ ಹೇಳಿರುವಾಗ ಸಂಸದ ರಾಘವೇಂದ್ರ ಹಾಗೂ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರು ಅಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ'' ಎಂದು ಹೇಳಿದ್ದಾರೆ.
''ಬಿಜೆಪಿ ನಮಗೆ ತಾಯಿ ಇದ್ದಂತೆ. ತಾಯಿ ಒಂದು ಕಣ್ಣಿಗೆ ಸುಣ್ಣ, ಇನ್ನೊಂದು ಕಣ್ಣಿಗೆ ಬೆಣ್ಣೆ ಮಾಡಲ್ಲ. ನಮ್ಮ ತಂದೆಗೆ ಚುನಾವಣಾ ರಾಜಕೀಯದಿಂದ ನಿವೃತ್ತರಾಗಬೇಕು ಎಂದಾಗ ಒಂದು ಕ್ಷಣ ಯೋಚಿಸದೆ ರಾಷ್ಟ್ರೀಯ ನಾಯಕರಿಗೆ ಪತ್ರ ಕಳುಹಿಸಿಕೊಟ್ಟಿದ್ದರು. ಆದರೂ ಸಹ ರಾಜ್ಯಾದ್ಯಂತ ಪ್ರವಾಸ ಮಾಡಿ, ಪಕ್ಷದ ಗೆಲುವಿಗೆ ಶ್ರಮವಹಿಸಿದ್ದಾರೆ. ನಾನು ಕ್ಷೇತ್ರದಲ್ಲಿ ಓಡಾಡಿದ್ದೇನೆ. ಪಕ್ಷದ ತೀರ್ಮಾನದಂತೆ ನಾನು ಸ್ಪರ್ಧೆ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಟಿಕೆಟ್ ತಪ್ಪಲ್ಲ'' ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಕೆಲ ಹಾಲಿ ಸಂಸದರಿಗೆ ಟಿಕೆಟ್ ಮಿಸ್ ವಿಚಾರ: ಬೆಳಗಾವಿಯಲ್ಲಿ ಶೋಭಾ ಕರಂದ್ಲಾಜೆ ಹೇಳಿದ್ದೇನು?