ಬೆಂಗಳೂರು: ಇಲ್ಲಿ ಬೆಲೆ ಏರಿಕೆ ಮಾಡಿ, ಬೇರೆ ದೇಶಗಳ ಕ್ರಿಕೆಟ್ ತಂಡಗಳಿಗೆ ಪ್ರಾಯೋಜಕತ್ವ ನೀಡಿ, ಸಾಮಾನ್ಯ ನಾಗರಿಕರ ಮೇಲೆ ಹೊಡೆತ ಕೊಡುವ ಬದಲು, ನಿಮ್ಮ ಪಕ್ಷದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರದ್ದು ಮಾಡಿ, ಅನಗತ್ಯ ಹೊರೆಯನ್ನು ಇಳಿಸಿ ರೈತರ ಸಹಾಯಕ್ಕೆ ಬನ್ನಿ, ಮಹಿಳೆಯರ ಮತ್ತು ಮಕ್ಕಳ ಹಿತ ದೃಷ್ಟಿಯಿಂದ ಈ ಹಾಲಿನ ದರದ ಏರಿಕೆಯ ಪ್ರಸ್ತಾವನೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಜಿ ಸಚಿವ ಸುರೇಶ್ ಕುಮಾರ್ ಪತ್ರದ ಮೂಲಕ ಒತ್ತಾಯಿಸಿದ್ದಾರೆ.
ಹಾಲಿನ ದರ ಪರಿಷ್ಕರಣೆ ವಾಪಸ್ಗೆ ಆಗ್ರಹಿಸಿ ಸಿಎಂಗೆ ಸುದೀರ್ಘ ಪತ್ರ ಬರೆದಿರುವ ಸುರೇಶ್ ಕುಮಾರ್, ಯಾವುದೇ ಗ್ರಾಹಕ 50 ML ಹಾಲು ಹೆಚ್ಚುವರಿ ಬೇಕೆಂದು ಕೇಳಿರಲಿಲ್ಲ. ಯಾರಿಗಾದರೂ ಇದು ಅಗತ್ಯವೆಂದು ತಿಳಿದು ಬಂದಿಲ್ಲ. ಆದರೂ ಈ ಘೋಷಣೆ ಆಗಿದೆ. ಹೈನುಗಾರಿಕೆ ಕಾಯಕದಲ್ಲಿರುವ ರೈತರಿಗೆ ಹಾಲು ಹೆಚ್ಚು ಉತ್ಪಾದನೆ ಆಗುತ್ತಿರುವ ಈ ಸಮಯದಲ್ಲಿ ಹೆಚ್ಚಿನ ಬೆಂಬಲ ಬೆಲೆ ಸಿಗಬೇಕು ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳುತ್ತೇವೆ. ಆದರೆ ಹೇಗೆ? ಎನ್ನುವುದು ಮುಖ್ಯ ಎಂದು ತಿಳಿಸಿದ್ದಾರೆ.
2023 ಜುಲೈ ತಿಂಗಳಲ್ಲಿ ಕೆಎಂಎಫ್ ರಾಜ್ಯ ಸರ್ಕಾರದ ಹಸಿರು ನಿಶಾನೆಯೊಂದಿಗೆ ಪ್ರತಿ ಲೀಟರ್ ಹಾಲಿಗೆ ₹3 ರೂ ಹೆಚ್ಚಳ ಮಾಡಿತ್ತು. ಆಗಲೂ ಸಹ " ಇದು ಮೂರು ರೂಪಾಯಿ ದರ ಏರಿಕೆಯಲ್ಲ, ಬದಲಿಗೆ 50ml ಹಾಲನ್ನು ಅಧಿಕವಾಗಿ ಕೊಡಲಾಗುವುದು" ಎಂದು ಹೇಳಲಾಗಿತ್ತು. ಆದರೆ ಕೆಲವೇ ತಿಂಗಳುಗಳ ನಂತರ ಆ 50 ml ಹೆಚ್ಚುವರಿ ಹಾಲು ಎಲ್ಲಿ ಮಾಯವಾಯಿತು ಯಾರಿಗೂ ಗೊತ್ತಿಲ್ಲ. ಮೇ 1, 2023 ರಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡುತ್ತಾ ಹಾಲಿಗೆ ಸಬ್ಸಿಡಿಯನ್ನು ಪ್ರತಿ ಲೀಟರ್ಗೆ ₹2 ರೂ ನಷ್ಟು ಹೆಚ್ಚಿಸುವುದಾಗಿ ಘೋಷಿಸಿದ್ದರು. ಆದರೆ ಆಗ ಮತದಾರರಾಗಿದ್ದ ಜನತೆಗೆ ಗೊತ್ತಾಗಲಿಲ್ಲ, ಈ ಹೆಚ್ಚುವರಿ ಎರಡು ರೂಪಾಯಿಯನ್ನು ಗ್ರಾಹಕರಾದ ತಾವೇ ಹೊರಬೇಕಾಗುತ್ತದೆ ಎಂದು ಹಾಲಿನ ದರ ಪರಿಷ್ಕರಣೆಯನ್ನು ಟೀಕಿಸಿದ್ದಾರೆ.
ಮುಖ್ಯಮಂತ್ರಿಗಳೇ, ತಮಗೆ ತಿಳಿದಿರುವಂತೆ ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿರುವ ಲಕ್ಷಾಂತರ ಮಕ್ಕಳು ಮತ್ತು ಮಹಿಳೆಯರಿಗೆ ಹಾಲು ಸುಲಭವಾಗಿ ಪ್ರೋಟೀನ್ ಒದಗಿಸುವ ಒಂದು ಆಹಾರ ಮೂಲ. ಆದರೆ, ಒಂದೇ ವರ್ಷದಲ್ಲಿ ಎರಡು ಬಾರಿ ಹಾಲಿನ ದರವನ್ನು ಏರಿಸುವ ಮೂಲಕ ತಾವು ಬಡ ಗ್ರಾಹಕರ ಅದರಲ್ಲಿಯೂ ವಿಶೇಷವಾಗಿ ಕುಟುಂಬಗಳ ಕೊಳ್ಳುವಿಕೆಯ ಶಕ್ತಿಗೆ ಪೆಟ್ಟು ನೀಡುತ್ತಿದ್ದೀರಿ ಮತ್ತು ಅಗತ್ಯವಿರುವ ಪ್ರೋಟೀನ್ ಮೂಲವನ್ನು ನಿರಾಕರಿಸುತ್ತಿದ್ದೀರಿ ಎಂದು ಆರೋಪಿಸಿದ್ದಾರೆ.