ಕರ್ನಾಟಕ

karnataka

ETV Bharat / state

ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ ಶತಸಿದ್ಧ: ಎಂ.ಲಕ್ಷ್ಮಣ್ - Chamundi Hill Development Authority - CHAMUNDI HILL DEVELOPMENT AUTHORITY

ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.

KPCC media spokesperson M Laxman
ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ (ETV Bharat)

By ETV Bharat Karnataka Team

Published : Aug 17, 2024, 9:06 AM IST

ಮೈಸೂರು: "ಚಾಮುಂಡಿ ಬೆಟ್ಟವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದು, ಸಂಪೂರ್ಣ ರಕ್ಷಿಸುವ ನಿಟ್ಟಿನಲ್ಲಿ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದು ಶತಸಿದ್ಧ" ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಮೂರು ದಿನಗಳ ಹಿಂದೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಮುಂಡಿ ಬೆಟ್ಟದ ಪ್ರಾಧಿಕಾರದ ರಚನೆಯ ಗೆಜೆಟ್ ನೋಟಿಫಿಕೇಶನ್ ಹೊರಡಿಸಿರುವ ಬಗ್ಗೆ ತಕರಾರು ಅರ್ಜಿ ಹಾಕಿದ್ದಾರೆ. ಚಾಮುಂಡಿ ಬೆಟ್ಟವು ತಮಗೆ ಸೇರಿದೆ ಎಂದು ಹೇಳಿದ್ದಾರೆ. ಇದಕ್ಕೆ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಒಳಗೊಂಡಂತೆ, ಹೆಚ್​. ವಿಶ್ವನಾಥ್ ಆದಿಯಾಗಿ ಬಹಳ ಜನರು ಕೆಟ್ಟದಾಗಿ ಮಾತನಾಡಿದ್ದಾರೆ. ವಿಶ್ವನಾಥ್ ಆಧಾರವೇ ಇಲ್ಲದೆ ಮಾತನಾಡುವ ಚಟ ಇಟ್ಟುಕೊಂಡಿದ್ದಾರೆ. ಸಿಎಂ ಯಾವಾಗ ಅಧಿಕಾರಕ್ಕೆ ಬಂದರೂ ರಾಜಮನೆತನದ ವಿರುದ್ಧ ಹೋಗುತ್ತಾರೆಂಬ ವಿಶ್ವನಾಥ್ ಹೇಳಿಕೆಯನ್ನು ಖಂಡಿಸುತ್ತೇನೆ.​ ಅವರಿಗೆ ಮಾಹಿತಿ ಇಲ್ಲದಿದ್ದರೆ, ಮಾಹಿತಿ ಪಡೆದು ಮಾತನಾಡಬೇಕು" ಎಂದು ಎಚ್ಚರಿಕೆ ನೀಡಿದರು.

"ಇದೇ ವಿಶ್ವನಾಥ್, ಶಾಸಕ‌ ಜಿ.ಟಿ.ದೇವೇಗೌಡ ಹಾಗೂ ಮಾಜಿ ಸಂಸದ ಪ್ರತಾಪ್​ ಸಿಂಹ ಅವರು ಸಿದ್ದರಾಮಯ್ಯ ಅವರಿಗೆ ಪ್ರಾಧಿಕಾರ ರಚನೆ ಆಗಬೇಕು ಎಂದು ಈ ಹಿಂದೆ ಪತ್ರ ಬರೆದಿದ್ದಾರೆ. ಈಗ ರಾಜವಂಶ್ಥರು ಮಾತನಾಡಿದರೆಂಬ ಮಾತ್ರಕ್ಕೆ ತಮ್ಮ ಮಾತು ಬದಲಾಯಿಸುವುದು ಸರಿಯಲ್ಲ" ಎಂದರು.

"ಚಾಮುಂಡಿ ಬೆಟ್ಟದ‌ ಮೇಲೆ ಖಾಸಗಿ ಹೋಟೆಲ್​ವೊಂದನ್ನು ಬಿಟ್ಟು ಉಳಿದೆಲ್ಲವೂ ಮುಜರಾಯಿ ಇಲಾಖೆ ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದೆ. ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟು ಯಾವ ಕಾಲವೋ ಆಗಿದೆ. 2015ರಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಪ್ರಸಾದ್ ಯೋಜನೆಯಡಿಯಲ್ಲಿ 50 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರಕ್ಕೆ ನೀಡಿ ಅದರ ಮೂಲಕ ಅಭಿವೃದ್ಧಿ ನಡೆಸಲು ನೀಡಿದೆ" ಎಂದರು.

"ಚಾಮುಂಡಿ ಬೆಟ್ಟ ಅಡ್ಡಾದಿಡ್ಡಿಯಾಗಿ ಬೆಳೆಯುತ್ತಿದ್ದು, ಅವೈಜ್ಞಾನಿಕ ಕಾಂಕ್ರೀಟಿಕರಣ ಸಹ ನಡೆಯುತ್ತಿದೆ.‌ ಇದೆಲ್ಲವನ್ನೂ ತಡೆಯಲು ಪ್ರಾಧಿಕಾರ ಸೂಕ್ತ ಎಂಬ ಜನಾಭಿಪ್ರಾಯ, ಜನಪ್ರತಿನಿಧಿಗಳ ಆಶಯದಂತೆ ಪ್ರಾಧಿಕಾರ ರಚನೆಯಾಗಿದೆ. ಅದರಲ್ಲೂ ಸಿಎಂ‌ ಅಧ್ಯಕ್ಷರಾಗಿದ್ದರೆ, ಮುಜರಾಯಿ ಇಲಾಖೆ ಸಚಿವ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಉಪಾಧ್ಯಕ್ಷರಾಗಿರುತ್ತಾರೆ. ಜಿಲ್ಲಾಧಿಕಾರಿ ಪ್ರಧಾನ ಕಾರ್ಯದರ್ಶಿ ಸೇರಿ ಒಬ್ಬರು ರಾಜವಂಶಸ್ಥರೂ ಶಾಶ್ವತ ಸದಸ್ಯರಾಗಿರುತ್ತಾರೆ. ಯಾವುದೇ ನಾಮ ನಿರ್ದೇಶಿತ ಸದಸ್ಯರು ಸಹ ಇದರಲ್ಲಿ ಇರುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ" ಎಂದು ಹೇಳಿದರು.

"ಪ್ರಾಧಿಕಾರದ ವಿಚಾರವಾಗಿ ಮಾತನಾಡುವ ಶಾಸಕ ಜಿ.ಟಿ.ದೇವೇಗೌಡ, ವಿಶ್ವನಾಥ್ ಅವರು ಚಾಮುಂಡಿ ಬೆಟ್ಟದ ಸುತ್ತಲೂ ಬಹುತೇಕ ಎಲ್ಲಾ ಮಠಾಧೀಶರೇ ಒತ್ತುವರಿ ಮಾಡಿಕೊಂಡಿರುವ ಬಗ್ಗೆಯೂ ಪ್ರಸ್ತಾಪಿಸುವ ದೈರ್ಯ ತೋರಲಿ. ಅದನ್ನು ಬಿಟ್ಟು ವಿಶ್ವನಾಥ್ ಅವರು ತಮ್ಮ ತೆವಲಿಗೆ ಎನೇನೋ ಮಾತನಾಡುವುದು ಸರಿಯಲ್ಲ. ನಿತ್ಯ ಸಿದ್ದರಾಮಯ್ಯ ಅವರನ್ನು ಬೈಯುವುದೇ ಕೆಲಸವೇ?" ಎಂದು ಪ್ರಶ್ನಿಸಿದರು.

ಗೋಸುಂಬೆ ಆಟ ನಿಲ್ಲಿಸಿ: "ಈಗ ಪ್ರಾಧಿಕಾರ ವಿರೋಧಿಸುತ್ತಿರುವವರೇ ಹಿಂದೆ ಪ್ರಾಧಿಕಾರ ಘೋಷಣೆಯಾದಾಗ ಧನ್ಯವಾದ ಹೇಳಿದ್ದೀರಿ. ಅದನ್ನು ಮರೆತು ಈಗ ಹೀಗೆ ಗೋಸುಂಬೆ ರೀತಿ ಯಾಕೆ ಮಾತು ಬದಲಿಸುತ್ತೀರಿ?" ಎಂದು ಲಕ್ಷ್ಮಣ್ ಕಿಡಿಕಾರಿದರು.

"ಪ್ರಮೋದಾ ದೇವಿ ಅವರು ದೇವಾಲಯ ತಮಗೆ ಯಾವ ರೀತಿ ಸೇರಿದ್ದು ಎಂದು ಹೇಳಬೇಕು. ಗಂಗ ವಂಶಸ್ಥರು ದೇವಾಲಯ ನಿರ್ಮಿಸಿದ ಬಗ್ಗೆ ಪುರಾವೆಗಳಿವೆ. ನಿಮ್ಮದೊಂದು ಹೋಟೆಲ್ ಇದೆ. ಉಳಿದಿರುವ ಬಗ್ಗೆ ನ್ಯಾಯಾಲಯಕ್ಕೆ ಹೋಗಿದ್ದೀರಿ. ಹೈಕೋರ್ಟ್​ ಪ್ರಾಧಿಕಾರ ರಚನೆಗೆ ತಾತ್ಕಾಲಿಕ ತಡೆ ನೀಡಿದೆ. ಸರ್ಕಾರ ಅದನ್ನು ಮುಂದುವರೆಸುತ್ತದೆ. ಯಾವುದೇ ಕಾರಣಕ್ಕೂ ಪ್ರಾಧಿಕಾರವನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ" ಎಂದರು.

ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಭಾಸ್ಕರ್, ಮಾಧ್ಯಮ ವಕ್ತಾರ ಮಹೇಶ, ಹೇಮಂತ್ ಇನ್ನಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಫಾಕ್ಸ್ ಕಾನ್ ಕಂಪನಿಗೆ ಸಂಪೂರ್ಣ ಸಹಕಾರದ ಭರವಸೆ: ಹೆಚ್ಚಿನ ಹೂಡಿಕೆಗೆ ಸಿಎಂ ಮನವಿ - Foxconn Company Investment

ABOUT THE AUTHOR

...view details