ಕರ್ನಾಟಕ

karnataka

ETV Bharat / state

ಉತ್ತರ ಕನ್ನಡ: ಫಸಲ್​ ಭೀಮಾ ಯೋಜನೆಯಡಿ ರೈತರಿಗೆ ₹44.34 ಕೋಟಿ ಪರಿಹಾರ ಬಿಡುಗಡೆ - Fasal Bima Yojana - FASAL BIMA YOJANA

ಮುಂಗಾರು ಹಂಗಾಮಿನಲ್ಲಿ ತಮ್ಮ ಬೆಳೆಗಳಿಗೆ ವಿಮೆ ಪಡೆದಿದ್ದ ಉತ್ತರ ಕನ್ನಡ ಜಿಲ್ಲೆಯ ರೈತರಿಗೆ ಒಟ್ಟು 44,34,77,748 ರೂ. ವಿಮಾ ಮೊತ್ತ ಬಂದಿದೆ.

ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ
ಉತ್ತರ ಕನ್ನಡ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ (ETV Bharat)

By ETV Bharat Karnataka Team

Published : May 22, 2024, 10:39 AM IST

ಕಾರವಾರ:ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್​​​​ ಭೀಮಾ ಯೋಜನೆಯಡಿ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಮ್ಮ ಬೆಳೆಗಳಿಗೆ ವಿಮೆ ಪಡೆದಿದ್ದ ಜಿಲ್ಲೆಯ 27,637 ರೈತರಿಗೆ ಒಟ್ಟು 44,34,77,748 ರೂ.ಗಳ ವಿಮಾ ಮೊತ್ತ ಅವರ ಬ್ಯಾಂಕ್​ ಖಾತೆಗಳಿಗೆ ಜಮೆಯಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅವರು ಮಂಗಳವಾರ ಮಾಹಿತಿ ನೀಡಿದರು.

ಪ್ರಧಾನ ಮಂತ್ರಿ ಫಸಲ್​​​​ ಭೀಮಾ ಯೋಜನೆ: ಪ್ರಕೃತಿ ವಿಕೋಪಗಳಿಂದ ತಮ್ಮ ಯಾವುದೇ ಅಧಿಸೂಚಿತ ಬೆಳೆ ವಿಫಲವಾದ ಪಕ್ಷದಲ್ಲಿ ರೈತರಿಗೆ ವಿಮಾ ರಕ್ಷಣೆ ಮತ್ತು ಆರ್ಥಿಕ ಬೆಂಬಲ ಒದಗಿಸುವ ಉದ್ದೇಶದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಶೇ. 50:50 ನೆರವಿನ ಈ ಯೋಜನೆಯಡಿ, 2023-24ರಲ್ಲಿ ತಮ್ಮ ಮುಂಗಾರು ಬೆಳೆಗಳಿಗೆ ರಾಷ್ಟೀಕೃತ ಬ್ಯಾಂಕ್‌ಗಳ ಮೂಲಕ ವಿಮೆ ಪಡೆದಿದ್ದ ಜಿಲ್ಲೆಯ ರೈತರಿಗೆ ಈ ಪರಿಹಾರದ ಮೊತ್ತ ಬಿಡುಗಡೆಗೊಂಡಿದೆ.

ಜಿಲ್ಲೆಯಲ್ಲಿ ಈ ಯೋಜನೆಯಡಿ ನೋಂದಾವಣೆ ಮಾಡಿಕೊಂಡಿದ್ದ, ಭಟ್ಕಳ ತಾಲೂಕಿನ 271 ರೈತರಿಗೆ ರೂ. 1,54,644 , ದಾಂಡೇಲಿ ತಾಲೂಕಿನ 103 ರೈತರಿಗೆ ರೂ. 4,63,893, ಹಳಿಯಾಳ ತಾಲೂಕಿನ 8,883 ರೈತರಿಗೆ ರೂ. 5,35,41,942 , ಹೊನ್ನಾವರ ತಾಲೂಕಿನ 84 ರೈತರಿಗೆ ರೂ. 36,671, ಜೋಯಿಡಾ ತಾಲೂಕಿನ 275 ರೈತರಿಗೆ ರೂ. 1,29,795, ಕುಮಟಾ ತಾಲೂಕಿನ 57 ರೈತರಿಗೆ ರೂ. 50,408, ಮುಂಡಗೋಡು ತಾಲೂಕಿನ 7041 ರೈತರಿಗೆ ರೂ. 20,28,49,480, ಸಿದ್ದಾಪುರ ತಾಲೂಕಿನ 421 ರೈತರಿಗೆ ರೂ. 3,59,997, ಶಿರಸಿ ತಾಲೂಕಿನ 9123 ರೈತರಿಗೆ ರೂ. 17,72,58,214, ಯಲ್ಲಾಪುರ ತಾಲೂಕಿನ 1379 ರೈತರಿಗೆ ರೂ. 86,32,698 ರೂ. ಸೇರಿದಂತೆ ಒಟ್ಟು 44.34 ಕೋಟಿ ರೂ ಮೊತ್ತವು ರೈತರ ಖಾತೆಗಳಿಗೆ ಜಮೆಗೊಂಡಿದೆ.

ಪ್ರಾಕೃತಿಕ ವಿಪತ್ತು ಸಂಭವಿಸಿದ ವರ್ಷದಲ್ಲಿ ಕೃಷಿಯನ್ನೇ ನಂಬಿಕೊಂಡಿದ್ದ ರೈತರ ಕೃಷಿ ಆದಾಯ ಸ್ಥಿರವಾಗಿರುವಂತೆ ಮಾಡಲು ಈ ಯೋಜನೆ ನೆರವಾಗಿದೆ. ಈ ಯೋಜನೆಯು ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘ ಸ್ಪೋಟ, ಗುಡುಗು-ಮಿಂಚುಗಳಿಂದಾಗುವ, ಬೆಂಕಿ ಅವಘಡಗಳಿಂದ ಉಂಟಾಗುವ ನಷ್ಠವನ್ನು, ವೈಯಕ್ತಿಕವಾಗಿ ನಿರ್ಧರಿಸಿ, ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸುವ ಮೂಲಕ ಆರ್ಥಿಕ ಸಂಕಷ್ಟದಿಂದ ರೈತರನ್ನು ಪಾರು ಮಾಡಲಾಗುತ್ತಿದೆ.

2023-24ರ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಭತ್ತ, ಮೆಕ್ಕಜೋಳ ಮತ್ತು ಹತ್ತಿ ಬೆಳೆಗಳನ್ನು ಅಧಿಸೂಚಿತ ಬೆಳೆಗಳನ್ನಾಗಿ ಗುರುತಿಸಿದ್ದು, ಜಿಲ್ಲೆಯಲ್ಲಿ ಈ ಬೆಳೆಗಳನ್ನು ಬೆಳಯುವ 27,637 ರೈತರು ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿದ್ದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಜಿಲ್ಲೆಯ ರೈತರಿಗೆ 44 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಿಮಾ ಮೊತ್ತ ಅವರ ಬ್ಯಾಂಕ್​ ಖಾತೆಗಳಿಗೆ ಜಮೆ ಆಗಿದೆ.

2023-24ರಲ್ಲಿ ಮುಂಗಾರು ಕೊರತೆಯಿಂದ ಜಿಲ್ಲೆಯ 11 ತಾಲೂಕುಗಳು ಬರ ಪೀಡಿತ ಎಂದು ಘೋಷಣೆಯಾಗಿದ್ದು, ಕೃಷಿ ಬೆಳೆಯ ನಷ್ಟಕ್ಕೆ ಒಳಗಾಗಿದ್ದ ಜಿಲ್ಲೆಯ ರೈತರಿಗೆ ಈ ವಿಮಾ ಮೊತ್ತದಿಂದ ಗರಿಷ್ಟ ಆರ್ಥಿಕ ಸಂಕಷ್ಟವಾಗುವುದು ತಪ್ಪಿದೆ. ಮುಂದಿನ ದಿನದಲ್ಲಿ ಜಿಲ್ಲೆಯ ರೈತರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆ ವಿಮೆಗೆ ನೋಂದಣಿ ಮಾಡಿಕೊಳ್ಳುವ ಮೂಲಕ, ಯಾವುದೇ ರೀತಿಯ ಪ್ರಾಕೃತಿಕ ವಿಕೋಪಗಳಿಗೆ ಒಳಗಾದರೂ ಆರ್ಥಿಕವಾಗಿ ಸುಸ್ಥಿರರಾಗಲು ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.

ಇದನ್ನೂ ಓದಿ:ಮುಂಗಾರುಪೂರ್ವ ಮಳೆ ಉತ್ತಮ: ಕೃಷಿ ಚಟುವಟಿಕೆ ಚುರುಕು, ಬಿತ್ತನೆ ಬೀಜಕ್ಕೆ ರೈತರ ನೂಕುನುಗ್ಗಲು - Seeds Distribution

ABOUT THE AUTHOR

...view details