ದಾವಣಗೆರೆ:ಇಡೀ ದೇಶದಲ್ಲೇ ಇಲ್ಲದ ಯುರೋಪ್ ಶೈಲಿಯ ವಿಶೇಷ ವೃತ್ತಗಳ ಪ್ರಾಯೋಗಿಕ ನಿರ್ಮಾಣ ಕಾರ್ಯ ದಾವಣಗೆರೆಯಲ್ಲಿ ನಡೆಯುತ್ತಿದೆ. ನಗರದ ರಸ್ತೆಗಳು, ವೃತ್ತಗಳನ್ನು ವಿದೇಶಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
ಈ ವೃತ್ತಗಳು ಸಾಕಷ್ಟು ವಿಶೇಷತೆಗಳನ್ನು ಹೊಂದಿವೆ. ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಇದನ್ನು ನಿರ್ಮಿಸಲಾಗುತ್ತಿದೆ. ಇವು 40-50 ವರ್ಷಗಳ ಕಾಲ ಬಾಳಿಕೆ ಬರುತ್ತವೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆ, ಸ್ಮಾರ್ಟ್ ಸಿಟಿ, ಪಾಲಿಕೆ ನೇತೃತ್ವದಲ್ಲಿ ಕಾಮಗಾರಿ ನಡೆಯುತ್ತಿದೆ. ಸದ್ಯ ವಿದ್ಯಾರ್ಥಿ ಭವನ ವೃತ್ತದಲ್ಲಿ ಪ್ರಾಯೋಗಿಕ ಕಾಮಗಾರಿ ಪ್ರಗತಿಯಲ್ಲಿದೆ.
ಯುರೋಪ್ ಶೈಲಿಯ ವೃತ್ತಗಳ ಪ್ರಯೋಗದ ಬಗ್ಗೆ ಮೇಯರ್, ಗುತ್ತಿಗೆದಾರ, ಪಾಲಿಕೆ ಸದಸ್ಯರಿಂದ ಮಾಹಿತಿ. (ETV Bharat) "ಸುಮಾರು 75 ಅಡಿ ಅಗಲ, 25 ಅಡಿ ಉದ್ದದಲ್ಲಿ ಕಾಮಗಾರಿಯನ್ನು ಗುತ್ತಿಗೆದಾರರು ಕೈಗೆತ್ತಿಕೊಂಡಿದ್ದಾರೆ. ಎರಡು ದಿನಗಳಲ್ಲಿ ಕೆಲಸ ಪೂರ್ಣಗೊಳ್ಳಲಿದೆ. ಬಳಿಕ ವೃತ್ತದ ಮೇಲೆ ಬೃಹತ್ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು ಈ ತಿಂಗಳ ಅಂತ್ಯದಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದಾದ ಬಳಿಕ ಮುಂದಿನ ಪ್ರಮುಖ ಸರ್ಕಲ್ಗಳಲ್ಲಿ ಕಾಮಗಾರಿ ಆರಂಭಿಸಲಾಗುತ್ತದೆ. ಈ ವೃತ್ತಗಳು ಆಟೋಮ್ಯಾಟಿಕ್ ಸ್ಪೀಡ್ ಬ್ರೇಕರ್ ಆಗಿ ಕೆಲಸ ಮಾಡಲಿವೆ. ಮುಂದಿನ ದಿನಗಳಲ್ಲಿ ಪಾಲಿಕೆ ಕೂಡ ಈ ಕಾಮಗಾರಿ ಕೈಗೆತ್ತಿಕೊಳ್ಳಲಿದೆ" ಎಂದು ಮೇಯರ್ ಕೆ.ಚಮನ್ ಸಾಬ್ ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಯುರೋಪ್ ಶೈಲಿಯ ವೃತ್ತಗಳ ಪ್ರಯೋಗ (ETV Bharat) ಈ ಕಾಮಗಾರಿ ಹೇಗೆ ನಡೆಯುತ್ತದೆ?: ಒಂದು ಅಡಿ, ನಾಲ್ಕು ಇಂಚು ಆಳ ತೋಡಲಾಗುತ್ತದೆ. ಅದರಲ್ಲಿ 100 ಎಂಎಂ ಜಲ್ಲಿ ಕಲ್ಲು, 100 ಎಂಎಂನ ಡಿಎಲ್‌ಪಿ, ಉತ್ತಮ ದರ್ಜೆಯ ಎಂ4 ಕಾಂಕ್ರಿಟ್ ಹಾಕಲಾಗುತ್ತಿದೆ. ಜೊತೆಗೆ ಗ್ರಾನೈಟ್ ಕಲ್ಲುಗಳನ್ನು ಅಳವಡಿಸಲಾಗುತ್ತದೆ. ಬಳಿಕ ಅದರ ಮೇಲೆ ಕೆಮಿಕಲ್ ಹಾಕಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ.
"ಕಲ್ಲುಗಳನ್ನು ಸೈಜ್ ಟೋನ್ ರೀತಿ ಕಟ್ ಮಾಡಿ ವೃತ್ತಕ್ಕೆ ಬಳಕೆ ಮಾಡಲಾಗುತ್ತದೆ. ಲಂಡನ್, ಜರ್ಮನ್, ಯುರೋಪ್‌ನಲ್ಲಿ ಈ ರೀತಿ ವೃತ್ತಗಳನ್ನು ನೋಡಬಹುದು. ವಿದೇಶ ಪ್ರವಾಸದಲ್ಲಿದ್ದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅಲ್ಲಿಯ ವೃತ್ತಗಳನ್ನು ನೋಡಿ ಆಕರ್ಷಿತರಾಗಿ ಅದೇ ರೀತಿಯ ವೃತ್ತಗಳನ್ನು ದಾವಣಗೆರೆಯಲ್ಲಿ ಮಾಡಲು ಹೇಳಿದ್ದಾರೆ" ಎಂದು ಗುತ್ತಿಗೆದಾರ ಬಿಸ್ಲೆರಿ ಗಂಗಣ್ಣ ಈಟಿವಿ ಭಾರತ್ಗೆ ತಿಳಿಸಿದರು.
ಇದನ್ನೂ ಓದಿ:ಕಾರವಾರದಲ್ಲಿ ರಾಜ್ಯದ ಮೊದಲ ಕಡಲಜೀವಿ ಆರೈಕೆ ಕೇಂದ್ರ ; ಅರಣ್ಯ ಇಲಾಖೆಯಿಂದ 4 ಕೋಟಿ ವೆಚ್ಚದಲ್ಲಿ ನೀಲನಕ್ಷೆ