ಮಂಗಳೂರು:ಎಲೆಕ್ಟ್ರಾಲ್ ಬಾಂಡ್ ಪ್ರಪಂಚದ ಅತಿ ದೊಡ್ಡ ಭ್ರಷ್ಟಾಚಾರ. ಇಷ್ಟೊಂದು ಹಣ ಪಡೆದುಕೊಂಡ ಬಗ್ಗೆ ಪ್ರಧಾನಮಂತ್ರಿ ತಮ್ಮ ಮನ್ ಕಿ ಬಾತ್ನಲ್ಲಿ ಯಾಕೆ ಆ ಮಾತು ಹೇಳೊಲ್ಲ. ಈ ಬಗ್ಗೆ ಅವರು ಮಾತನಾಡಲಿ ಎಂದು ಬಹುಭಾಷ ನಟ ಪ್ರಕಾಶ್ ರಾಜ್ ಆಗ್ರಹಿಸಿದರು.
ಎಲೆಕ್ಟ್ರಾಲ್ ಬಾಂಡ್ ಲೂಟಿ ಅಲ್ವ:ಮಂಗಳೂರಿನಲ್ಲಿ ಮಾತನಾಡಿದ ಅವರು ಎಲೆಕ್ಟ್ರಾಲ್ ಬಾಂಡ್ ಲೂಟಿ ಅಲ್ವ ಅದು. ಎಲೆಕ್ಟ್ರಾಲ್ ಬಾಂಡ್ಗೆ ನಿಯಮ ತಂದು ಕಂಪನಿಗಳ ಹೆಸರನ್ನು ಯಾಕೆ ಗೌಪ್ಯವಾಗಿಟ್ಟಿರಿ. ದೇಶದ ಪ್ರಧಾನಮಂತ್ರಿ, ಗೃಹಮಂತ್ರಿ ಸುಳ್ಳು ಹೇಳುತ್ತಿದ್ದಾರೆ. ಗೃಹಮಂತ್ರಿ 6000 ಕೋಟಿ ತೆಗೆದುಕೊಂಡಿದ್ದೇವೆ, ಅದನ್ನು 330 ಸಂಸದರಿಗೆ ಹಂಚಿಕೊಂಡರೆ ಕಮ್ಮಿ ಆಗುತ್ತದೆ ಎಂದು ಹೇಳುತ್ತಾರೆ.
ಎಲ್ಲವೂ ರೇಡ್ ಆದ ಮೇಲೆಯೇ ಸಂಗ್ರಹ ಮಾಡಿದ್ದೀರಿ. ₹ 1000 ಕೋಟಿ ಲಂಚ ಕೊಡುವ ಲಾಟರಿ ಕಂಪನಿ ಇದೆ. ₹ 2000 ಕೋಟಿ ಕಾಂಟ್ರ್ಯಾಕ್ಟ್ ಗೆ 500 ಕೋಟಿ ಲಂಚ ಕೊಡುವುದೆಂದರೆ ಅದು ನಮ್ಮ ದುಡ್ಡನ್ನು ಕೊಟ್ಟದ್ದು. ಈ ದುಡ್ಡಿನಲ್ಲಿ ಶಾಸಕ, ಸಂಸದರನ್ನು ಖರೀದಿಸುತ್ತೀರಿ, ಕಾಸ್ಟ್ಯೂಮ್ ಖರೀದಿಸುತ್ತೀರಿ. ಇದರ ಬಗ್ಗೆ ಮನ್ ಕಿ ಬಾತ್ನಲ್ಲಿ ಒಂದು ಉತ್ತರವನ್ನು ಕೊಡುವುದಿಲ್ಲ ಎಂದು ಪ್ರಕಾಶ್ ರಾಜ್ ಅವರು ಮೋದಿಗೆ ಟಾಂಗ್ ನೀಡಿದರು.
ಇದನ್ನು ಬಿಟ್ಟು ಬೇರೆ ಎಲ್ಲ ಮಾತನಾಡುತ್ತಿದ್ದಾರೆ. ಈ ತರಹದ ಸುಳ್ಳನ್ನು ಜನರಿಗೆ ಹೇಳ್ತಾರೆ. ಇದು ಪ್ರಪಂಚದಲ್ಲಿ ನಡೆದ ಅತಿ ದೊಡ್ಡ ಭ್ರಷ್ಟಾಚಾರದ ಹಗರಣ. ದೇಶದಲ್ಲಿ ಲಕ್ಷಕ್ಕೂ ಹೆಚ್ಚು ವ್ಯಾಪಾರಿಗಳಿದ್ದಾರೆ. ಇವರು ಕಾಂಟ್ರ್ಯಾಕ್ಟ್ ಕೊಟ್ಟ ಸಾವಿರ ಕಂಪನಿಗಳಿಂದ ಬಾಂಡ್ ಮೂಲಕ ದುಡ್ಡು ಬಂದಿದೆ. ದುಡ್ಡು ತಗೊಂಡು ಕಾಂಟ್ರ್ಯಾಕ್ಟ್ ಕೊಡುವುದು, ಈಡಿ ರೇಡ್ ಮಾಡಿದ ಮರುದಿನ ಬಾಂಡ್ ಪಡೆದುಕೊಂಡಿರುವುದು ಸರಿಯೇ? ಇದನ್ನು ಯಾಕೆ ಹೇಳುತ್ತಿಲ್ಲ. ಇದನ್ನು ಮನ್ ಕಿ ಬಾತ್ ನಲ್ಲಿ ಹೇಳಿ ಎಂದು ಒತ್ತಾಯಿಸಿದರು.
ಈ ಬಾರಿ ನಾವು 400 ದಾಟುತ್ತೇವೆ ಹೇಳ್ತಾರೆ. ಏನು ಇದು ಅಹಂಕಾರ ಅಲ್ವಾ? ನೀವ್ಯಾರ್ರೀ ಅದನ್ನು ಹೇಳೋಕೆ. ಯಾವುದಕ್ಕೆ ಪ್ರಜಾಪ್ರಭುತ್ವ ಇರೋದು? ಹೀಗೆ ಬಂಗಾಳ, ಕರ್ನಾಟಕದಲ್ಲಿ ಹೇಳಿದ್ರಿ ಆಯ್ತಾ? ಈಗ ತಮಿಳುನಾಡಿನಲ್ಲಿ ಹೇಳಿದ್ರಿ, ಅಲ್ಲಿ ಆಯ್ತಾ? ಆಗಿಲ್ಲ. ಸುಮ್ಮೆ ಬಾಯಿಗೆ ಬಂದಂಗೆ ಹೇಳ್ಕಂಡು ಬರ್ತೀರಿ, ಸಾವಿರಾರು ಕೋಟಿ ಹಣ ಇದೆ ಅಂತ ಧೈರ್ಯಾನಾ? ಹಣ ಬಲದಿಂದ ಗೆದ್ದೇ ಗೆಲ್ಲುತ್ತೇವೆ ಅಂತ ಧೈರ್ಯನಾ? ಧರ್ಮವನ್ಬು ದುರುಪಯೋಗ ಪಡಿಸಿ, ಮತಗಳನ್ನು ದುಡ್ಡು ಕೊಟ್ಟು ಖರೀದಿಸ್ತೀವಿ ಅಂತ ಧೈರ್ಯಾನಾ? ಸುಮ್ನೆ ಇಮೇಜ್ ಸೃಷ್ಟಿಸೋಕಷ್ಟೆ ಹೇಳಿಕೊಂಡು ತಿರುಗ್ತೀರಿ ಎಂದು ವಾಗ್ದಾಳಿ ನಡೆಸಿದರು.