ಬೆಂಗಳೂರು: ಪಾಕಿಸ್ತಾನ ಪರ ಮಾತನಾಡುವವರನ್ನು ಟೀಕಿಸಲು ನನ್ನ ಅನುಮತಿ ಇದೆ ಎಂದು ಸ್ಪೀಕರ್ ಯು.ಟಿ.ಖಾದರ್ ವಿಧಾನಸಭೆಯಲ್ಲಿ ಹೇಳಿದರು. ಈ ಕುರಿತು ಮಾತನಾಡುವಾಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬೈಗುಳ ಬಳಕೆ ಮಾಡಿದರು. ಇದಕ್ಕೆ ಕಾಂಗ್ರೆಸ್ ಶಾಸಕ ಬಸವರಾಯರೆಡ್ಡಿ, ಪದ ಬಳಕೆ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸ್ಪೀಕರ್ ಖಾದರ್ ಮಧ್ಯಪ್ರವೇಶಿಸಿ, ಪಾಕಿಸ್ತಾನ ಪರ ಇರುವವರನ್ನು ಬೈದರೆ ತಪ್ಪಲ್ಲ ಎಂದರು. ಯಾರೂ ನೂರಕ್ಕೆ ನೂರರಷ್ಟು ಸರಿ ಇರುವುದಿಲ್ಲ. ಪಾಕಿಸ್ತಾನ ಪರ ಇರುವವರನ್ನು ಟೀಕಿಸಲು ಯಾವ ಭಾಷೆ ಬೇಕಾದರೂ ಬಳಕೆ ಮಾಡಲಿ, ಅದಕ್ಕೆ ಆಕ್ಷೇಪ ಇಲ್ಲ ಎಂದು ಹೇಳಿದರು. ಆಗ ಬಸನಗೌಡ ಪಾಟೀಲ್ ಯತ್ನಾಳ್, ಇವರೆಲ್ಲರ ಮಧ್ಯೆ ನೀವು ಒಬ್ಬ ದೇಶ ಭಕ್ತ. ನಿಮ್ಮನ್ನು ನಾನು ಮೆಚ್ಚುತ್ತೇನೆ. ನಿಜವಾಗಿಯೂ ನೀವು ದೇಶಭಕ್ತ ಎಂದು ಸ್ಪೀಕರ್ ಅವರನ್ನು ಹಾಡಿ ಹೊಗಳಿದರು.
ಪಾಕಿಸ್ತಾನ ಪರ ಇರುವವರನ್ನು ಬೈದರೆ ತಪ್ಪಲ್ಲ: ಸ್ಪೀಕರ್ ಖಾದರ್
ಪಾಕಿಸ್ತಾನ ಪರ ಘೋಷಣೆ ಕೂಗಿರುವ ಆರೋಪ ಪ್ರಕರಣ ವಿಚಾರವಾಗಿ ವಿಧಾನಸಭೆಯಲ್ಲಿ ಇಂದು ಆಡಳಿತ ಮತ್ತು ಪ್ರತಿಪಕ್ಷ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು.
Published : Feb 28, 2024, 4:04 PM IST
ಇದಕ್ಕೂ ಮೊದಲು ಮಾತನಾಡಿದ್ದ ಯತ್ನಾಳ್, ದೇಶಕ್ಕಿಂತ ಯಾರೂ ದೊಡ್ಡವರಲ್ಲ. ನಮಗೆ ಬೇಕಾದದ್ದು ತುಂಡು ಭಾರತವಲ್ಲ, ಸಮಗ್ರ ಭಾರತ ಎಂದರು. ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ದೇಶ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿರುವ ಹಿಂದೂಗಳು, ದಲಿತರೆಲ್ಲರೂ ಭಾರತಕ್ಕೆ ವಾಪಸಾಗಬೇಕು. ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳಿದ್ದರು. ಏಕೆಂದರೆ ಇಸ್ಲಾಂನಲ್ಲಿ ಇನ್ನೊಂದು ಧರ್ಮದ ಬಗ್ಗೆ ಸಹೋದರ ಭಾವನೆ ಇಲ್ಲ. ಅವರು ಮತ್ತೊಂದು ಧರ್ಮವನ್ನು ಸಹೋದರ ಭಾವನೆಯಿಂದ ನೋಡುವುದಿಲ್ಲ. ದೇಶದ ಬಗ್ಗೆ ನಿಷ್ಠೆ ಇರುವುದಿಲ್ಲ ಎಂದಿಳಿದ್ದರು ಎಂಬುದನ್ನು ಉಲ್ಲೇಖಿಸಿದ ಯತ್ನಾಳ್, ಪಾಕಿಸ್ತಾನ ಪರ ಇರುವವರನ್ನು ಖಂಡಿಸಿದರು.
ಪಾಕಿಸ್ತಾನ ಪರ ಘೋಷಣೆ ಕೂಗಲು ಅವಕಾಶ ಮಾಡಿಕೊಟ್ಟವರು ಯಾರು?. ಕಾಂಗ್ರೆಸ್ ಪಾಕಿಸ್ತಾನದ ಏಜೆಂಟರಂತೆ ಕಾಣಿಸುತ್ತಿದೆ. ಈ ರೀತಿ ಘೋಷಣೆ ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮುಂದೆ ಇಂತಹ ಪ್ರಕರಣಗಳು ಮರುಕಳುಹಿಸದಂತೆ ಸದನದಲ್ಲಿ ನಿರ್ಣಯವೂ ಆಗಬೇಕು ಎಂದು ಒತ್ತಾಯಿಸಿದರು. ಯತ್ನಾಳ್ ಮಾತಿಗೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಗದ್ದಲ ಉಂಟಾಯಿತು.