ದಾವಣಗೆರೆ: ಹಗಲು ಹೊತ್ತು ಮನೆಗಳಿಗೆ ಕನ್ನ ಹಾಕುತ್ತಿದ್ದ ಅಂತರ್‌ಜಿಲ್ಲಾ ಕಳ್ಳನನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಗೌತಂರಾಜ್ ಅಲಿಯಾಸ್ ಪೋತ್ ರಾಜ್ (34) ಬಂಧಿತ ಕಳ್ಳ. ಕೂಡ್ಲಿಗಿ ತಾಲೂಕಿನ ಕುಪ್ಪಿನಕೇರೆ ಗ್ರಾಮದವನಾದ ಈತನ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ 10ಕ್ಕೂ ಹೆಚ್ಚು ಪ್ರಕರಣಗಳಿವೆ.
ಆ.5ರಂದು ಹರಿಹರದ ಗಿರೀಶ್ ಎಂಬವರ ಮನೆಗೆ ಕನ್ನ ಹಾಕಿದ್ದ. ಈ ಬಗ್ಗೆ ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ.13ರಂದು ಹರಿಹರ ನಗರದ ಬಸ್ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಿ, 1,67,000 ರೂ. ಬೆಲೆಬಾಳುವ 26.83 ಗ್ರಾಂ ಬಂಗಾರ ಹಾಗೂ 2,450 ರೂ.ಬೆಲೆಯ 46.2 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.