ಚಾಮರಾಜನಗರ:ಮೂರು ಬಾರಿಗೆ ದಿನಾಂಕ ಬದಲಾದ ನಂತರ ಸಚಿವ ಸಂಪುಟ ಸಭೆ ಚಾಮರಾಜನಗರದಲ್ಲಿ ನಡೆಯುತ್ತಾ, ಇಲ್ವಾ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗಿ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಮುಹೂರ್ತ ನಿಗದಿಯಾಗಿದೆ.
ರೈತ ಮುಖಂಡರ ಪ್ರತಿಕ್ರಿಯೆ:"ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಚಾಮರಾಜನಗರದಲ್ಲಿ ಸಚಿವ ಸಂಪುಟ ನಡೆಸಲು ಸರ್ಕಾರ ನಿರ್ಧರಿಸಿತ್ತು. ಇದಕ್ಕೆ ಈಗಾಗಲೇ ಮೂರು ಬಾರಿ ದಿನಾಂಕ ಕೂಡ ನಿಗದಿಯಾಗಿತ್ತು. ಆದರೆ ಮೂರು ಬಾರಿಯೂ ದಿನಾಂಕ ಬದಲಾಗುತ್ತಲೇ ಇದೆ. ಜಿಲ್ಲೆಯ ಪವಿತ್ರ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಿಗದಿಯಾಗಿತ್ತು. ಜನರು ವಿದ್ಯುತ್, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನಿರೀಕ್ಷಿಸುತ್ತಿದ್ದಾರೆ" ಎಂದು ರೈತ ಮುಖಂಡ, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೇಳಿದರು.
"ಕ್ಯಾಬಿನೆಟ್ ಸಭೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವ ಬಗ್ಗೆ ಜನರಲ್ಲಿ ಭರವಸೆಯಿತ್ತು. ಆದರೆ ಇದೀಗ ಮೂರನೇ ಬಾರಿಗೆ ಸಚಿವ ಸಂಪುಟ ಮುಂದೂಡಿಕೆ ಆಗಿರುವುದರಿಂದ ಜಿಲ್ಲೆಗೆ ಸಾಕಷ್ಟು ಅನುದಾನ ಕೊಡುವ ಅನಿವಾರ್ಯತೆ ಎದುರಾಗುವ ದೃಷ್ಟಿಯಿಂದ ಸರ್ಕಾರ ಪದೇ ಪದೇ ದಿನಾಂಕ ಬದಲಾವಣೆ ಮಾಡುತ್ತಿದೆ. ಇದು ಸರ್ಕಾರ ಜಿಲ್ಲೆಯ ಜನರಿಗೆ ಮಾಡುತ್ತಿರುವ ಮೋಸ" ಎಂದು ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 8ರಂದು ಸಂಪುಟ ಸಭೆ- ಜಿಲ್ಲಾಧಿಕಾರಿ:"ಫೆ.16ರಂದು ಚಾಮರಾಜನಗರದಲ್ಲಿ ಸಮಾವೇಶ ಹಾಗೂ ಫೆ.17ರಂದು ಸಚಿವ ಸಂಪುಟ ಸಭೆ ನಡೆಸಲು ದಿನಾಂಕ ಕೂಡ ಫೈನಲ್ ಆಗಿತ್ತು. ಇದಕ್ಕೆ ಮುಂಚೆ ಎರಡು ಬಾರಿ ದಿನಾಂಕ ಬದಲಾಗಿತ್ತು. ಇದೂ ಸೇರಿ ಮೂರನೇ ಬಾರಿಗೆ ದಿನ ಬದಲಾವಣೆಯಾಗಿದೆ. ಮತ್ತೆ ನಮಗೆ ಮಾರ್ಚ್ 8ರಂದು ಸಂಪುಟ ಸಭೆ ಹಾಗೂ ಮಾರ್ಚ್ 9ರಂದು ಚಾಮರಾಜನಗರದಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ" ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.