ಸಮತಾ ಸೇನೆಯ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದ ಜನರಿಗೆ ನೀರು ಬಾರದಿದ್ದರೆ ಕಷ್ಟ ಆಗುತ್ತೋ ಇಲ್ಲವೋ. ಆದರೆ, ನೀರಿನ ಬಿಲ್ ಬಂದರೆ ಮಾತ್ರ ಕಣ್ಣಲ್ಲಿ ನೀರು ಬರುವುದಂತೂ ಸತ್ಯ. ಅವಳಿನಗರದಲ್ಲಿ ನೀರು ನಿರ್ವಹಣೆ ಎಲ್ ಆ್ಯಂಡ್ ಟಿ ಕಂಪನಿ ಸೇರಿದ ಮೇಲೆ ಗ್ರಾಹಕರೇ ಕಂಗಾಲಾಗಿದ್ದಾರೆ. ಇಷ್ಟು ದಿನ ನೂರು, ಇನ್ನೂರು ರೂಪಾಯಿ ಬರುತ್ತಿದ್ದ ನೀರಿನ ಬಿಲ್ ಈಗ ಸಾವಿರ ದಾಟಿ ಲಕ್ಷದ ಆಸುಪಾಸಿಗೆ ಬಂದು ನಿಂತಿದೆ.
ಸಾಮಾನ್ಯವಾಗಿ ಇಷ್ಟು ದಿನಗಳ ಕಾಲ ನೂರು ರೂಪಾಯಿಯಿಂದ ಸಾವಿರದವರೆಗೆ ನೀರಿನ ಬಿಲ್ ಬರುತ್ತಿತ್ತು. ಆದ್ರೆ ಅವಳಿನಗರದ ಬಹುತೇಕ ಕಡೆ ಸಾರ್ವಜನಿಕರಿಗೆ ಬಂದಿರುವ ನೀರಿನ ಬಿಲ್ ನೋಡಿದರೆ ಶಾಕ್ ಆಗುವುದು ಖಂಡಿತ. 75,000, 80,000, 90,000 ರೂಪಾಯಿ ಹೀಗೆ ನಿರೀಕ್ಷೆಗೂ ಮೀರಿದ ರೀತಿಯಲ್ಲಿ ನೀರಿನ ಬಿಲ್ ಬಂದಿರುವುದು ಜನರ ನಿದ್ದೆಗೆಡಿಸಿದೆ.
ಭುವನೇಶ್ವರಿನಗರ, ಹೆಗ್ಗೇರಿಯ ಜನತಾ ಮನೆಗಳಿಗೆ ಐದು ಅಂಕಿಯಲ್ಲಿ ನೀರಿನ ಬಿಲ್ ಬಂದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ನಿವಾಸಿಗಳು ಪಾಲಿಕೆಯ ಮುಂದೆ ಸೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾವು ಕುಡಿದ ನೀರಿಗೆ ಮಾತ್ರ ಬಿಲ್ ಕಟ್ಟುತ್ತೇವೆ ಎಂದು ಹೋರಾಟದ ಮೂಲಕ ಪಾಲಿಕೆಗೆ ಹಾಗೂ ಎಲ್ ಆ್ಯಂಡ್ ಟಿಗೆ ಎಚ್ಚರಿಕೆ ನೀಡಿದ್ದು, ಮನೆ-ಮನೆಗೆ ತಲಾ 70 ಸಾವಿರದಿಂದ 1 ಲಕ್ಷ ಮೀರಿದ ಬಿಲ್‌ಗಳನ್ನು ನೀಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಕುರಿತು ಪಾಲಿಕೆ ಮಹಾಪೌರರg ಹಾಗೂ ಕಮೀಷನರ್‌ಗೆ ಮನವಿ ಸಲ್ಲಿಸಿ, ಕೂಡಲೇ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು.
ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಗ್ರಾಹಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು: ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ.ಈಶ್ವರ್ ಉಳ್ಳಾಗಡ್ಡಿ, ''ಇದು ಮಹಾನಗರ ಪಾಲಿಕೆ ಗಮನಕ್ಕೆ ಬಂದಿದೆ. ಹಿಂದಿನ ಅರಿಯರ್ಸ್ ಸೇರಿಸಿಕೊಟ್ಟಿದ್ದರಿಂದ ಬಿಲ್ ಮೊತ್ತ ಹೆಚ್ಚಾಗಿದೆ. ಗ್ರಾಹಕರು ಸದ್ಯದ ಬಿಲ್‌ಕೊಡುವಂತೆ ಮನವಿ ಮಾಡಿದ್ದು, ಈ ಬಗ್ಗೆ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುವುದು. ಈಗಾಗಲೇ ಎಲ್ಎನ್ಟಿ ಹಾಗೂ ಮಹಾನಗರ ಪಾಲಿಕೆ ಸದಸ್ಯರ ಜೊತೆ ಸಭೆ ನಡೆಸಲಾಗಿದೆ. ಗ್ರಾಹಕರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು'' ಎಂದರು.
ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲಿ ನೀರಿನ ಅಭಾವ, ಟ್ಯಾಂಕರ್ಗೆ ಹೆಚ್ಚಿದ ಬೇಡಿಕೆ: ದುಪ್ಪಟ್ಟು ದರ ವಸೂಲಿಗೆ ಪಾಲಿಕೆ ಕಡಿವಾಣ