ಬೆಂಗಳೂರು:''ವಿಶೇಷ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ಅನುಮತಿ ಖಂಡಿಸಿದ್ದು, ಒಟ್ಟಾಗಿ ನಿಂತು ಕಾನೂನು ಹೋರಾಟ ಮಾಡಲು ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಗಿದೆ'' ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಿಶೇಷ ಸಚಿವ ಸಂಪುಟ ಸಭೆ ಬಳಿಕ ವಿಧಾನಸೌಧದಲ್ಲಿ ಸಂಪುಟ ಸಚಿವರ ಜೊತೆ ಜಂಟಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ''ತುರ್ತಾಗಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿದ್ದೇವೆ. ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಸಂಪುಟ ಸಹದ್ಯೋಗಿಗಳಿಗೆ ಧನ್ಯವಾದ ಸಮರ್ಪಿಸುತ್ತೇನೆ. ಇಡೀ ಸಚಿವ ಸಂಪುಟ ಒಕ್ಕೊರಲಿನ ಬೆಂಬಲ ವ್ಯಕ್ತಪಡಿಸಿದ್ದಾರೆ. ಪಕ್ಷ, ಕಾರ್ಯಕರ್ತರು, ಶಾಸಕರು, ಸಚಿವರು, ಸಂಸದರು ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಹೈಕಮಾಂಡ್ ಕೂಡ ಈ ಸಂದರ್ಭ ನಮ್ಮ ಜೊತೆ ಇರುತ್ತೇವೆ ಎಂದು ದೂರವಾಣಿ ಮೂಲಕ ಅಭಯ ನೀಡಿದ್ದಾರೆ. ರಾಜ್ಯಪಾಲರ ಈ ತೀರ್ಮಾನ ಕಾನೂನುಬಾಹಿರ, ಅಸವಿಂಧಾನಿಕವಾಗಿದೆ. ಈ ತೀರ್ಮಾನ ಕಾನೂನಾತ್ಮಕವಾಗಿಲ್ಲ. ರಾಜ್ಯಪಾಲರ ಪ್ರಾಸಿಕ್ಯೂಷನ್ ಅನ್ನು ಚಾಲೆಂಜ್ ಮಾಡುತ್ತೇವೆ'' ಎಂದು ತಿಳಿಸಿದರು.
''ಹೀಗಾಗಿ ಸಚಿವ ಸಂಪುಟ ಸಭೆ ಇದನ್ನು ಸಂಪೂರ್ಣವಾಗಿ ಖಂಡನೆ ಮಾಡಿದೆ. ರಾಜ್ಯಪಾಲರು ದೇಶದ ರಾಷ್ಟ್ರಾಧ್ಯಕ್ಷರ ಪ್ರತಿನಿಧಿಗಳು. ಅವರು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಕೆಲಸ ಮಾಡಬಾರದು. ಬಿಜೆಪಿ ಪ್ರತಿನಿಧಿಯಾಗಿ ಕೆಲಸ ಮಾಡಬಾರದು. ಅವರು ಕಾನೂನು ರೀತಿ ನಡೆದುಕೊಳ್ಳದೇ ಇದ್ದರಿಂದ ಅವರ ನಡವಳಿಕೆಯನ್ನು ಸಚಿವ ಸಪುಟ ಅತ್ಯಂತ ತೀವ್ರವಾಗಿ ಖಂಡಿಸಿದೆ. ಕೇಂದ್ರ ಸರ್ಕಾರ ಅನಗತ್ಯವಾಗಿ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರನ್ನು ಬಳಸುತ್ತಿದೆ. ರಾಜ್ಯಪಾಲರು ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ಪ್ರಜಾಪ್ರಭುತ್ವದ ಮೂಲಭೂತ ತತ್ವಕ್ಕೆ ಅಪಾಯವಾಗುತ್ತೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರುತ್ತೆ. ಅವರ ನಡವಳಿಕೆ ಸಂವಿಧಾನ, ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿರುವುದರಿಂದ ಅವರ ನಡೆಯನ್ನು ಖಂಡಿಸಿದ್ದೇವೆ'' ಎಂದರು.
''ರಾಜ್ಯಪಾಲರ ಪ್ರಾಸಿಕ್ಯೂಷನ್ ಸಂಬಂಧ ಕಾನೂನು ಹೋರಾಟ ಮಾಡುತ್ತೇವೆ. ಇದು ರಾಜಕೀಯ ದುರುದ್ದೇಶಪೂರಿತವಾದ ತೀರ್ಮಾನ. ಇದು ಸರ್ಕಾರ ಅಸ್ಥಿರಗೊಳಿಸಲು ಮಾಡುವಂಥ, ಸರ್ಕಾರವನ್ನು ಪತನ ಮಾಡುವ ಸಂಚು. ನಮ್ಮ ಸರ್ಕಾರ ಬಡವರ ಪರ ಸರ್ಕಾರ, ಗ್ಯಾರಂಟಿಯನ್ನು ಜಾರಿಗೆ ತಂದಿದ್ದೇವೆ. ಅವರು ಗ್ಯಾರಂಟಿಗೆ ವಿರುದ್ಧವಾಗಿದ್ದರು. ನಾವು ನುಡಿದಂತೆ ನಡೆದಿದ್ದೇವೆ. ಬಿಜೆಪಿ ಹಾಗೂ ಜೆಡಿಎಸ್ ಸೇರಿ ನನ್ನನ್ನು ರಾಜಕೀಯವಾಗಿ ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ. ಅದು ಸಾಧ್ಯವಿಲ್ಲ. ಜನರ ಆಶೀರ್ವಾದ ನನಗೆ ಇದೆ, ನಮ್ಮ ಪಕ್ಷಕ್ಕೆ ಇದೆ. ಅವರು ಕುಟಿಲ ಯತ್ನದಿಂದ ಸರ್ಕಾರ ಪತನ ಮಾಡಲು ಹೊರಟಿದ್ದಾರೆ. ಅದು ಅವರ ಭ್ರಮೆಯಾಗಿದೆ'' ಎಂದು ಸಿಎಂ ಗರಂ ಆದರು.