ಬೆಂಗಳೂರು :ವೃಷಭಾವತಿ ವ್ಯಾಲಿಗೆ ಕೊಳಚೆ ನೀರು ಸೇರಿ ಕಲುಷಿತ ಆಗುವುದನ್ನು ತಪ್ಪಿಸುವ ಸಲುವಾಗಿ ಸಮಗ್ರ ಯೋಜನೆ ರೂಪಿಸಲು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವೃಷಭಾವತಿ ವ್ಯಾಲಿ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ಶನಿವಾರ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವೃಷಭಾವತಿ ನದಿಯಲ್ಲಿ ಕೊಳಚೆ ನೀರು ಸೇರಿ ಕಲುಷಿತ ಆಗುತ್ತಿದ್ದು, ಅದನ್ನು ತಡೆಯುವ ಸಲುವಾಗಿ ಪಾಲಿಕೆ, ಜಲಮಂಡಳಿ, ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಮನ್ವಯ ಸಾಧಿಸಿಕೊಂಡು ಸಮಗ್ರ ಯೋಜನೆ ರೂಪಿಸಬೇಕು ಎಂದರು.
ವೃಷಭಾವತಿ ವ್ಯಾಲಿಗೆ ಎಲ್ಲೆಲ್ಲಿ ಕೊಳಚೆ ನೀರು ಬರುತ್ತಿದೆ ಎಂಬುದನ್ನು ಪರಿಶೀಲಿಸಿ ಪಟ್ಟಿ ಮಾಡಬೇಕು. ನದಿ ಪಕ್ಕದಲ್ಲಿ ಎಷ್ಟು ಅಪಾರ್ಟ್ಮೆಂಟ್ಗಳು ಬರಲಿವೆ, ಖಾಸಗಿ ಅಪಾರ್ಟ್ಮೆಂಟ್ಗಳಿಂದ ನೇರವಾಗಿ ಬರುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಜೊತೆಗೆ ಅಪಾರ್ಟ್ಮೆಂಟ್ಗಳಲ್ಲಿ ಅಳವಡಿಸಿರುವ ತ್ಯಾಜ್ಯನೀರು ಸಂಸ್ಕರಣಾ ಘಟಕಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯಾ? ಎಂಬುದನ್ನು ಪರಿಶೀಲನೆ ನಡೆಸಬೇಕು ಎಂದು ಹೇಳಿದರು.
ಜಲಮಂಡಳಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (ETV Bharat) ಜಲಮಂಡಳಿ ವತಿಯಿಂದ ಎಷ್ಟು ಎಸ್ಟಿಪಿಗಳು ಕಾರ್ಯನಿರ್ವಹಿಸುತ್ತಿವೆ. ಹೊಸದಾಗಿ ಎಸ್ಟಿಪಿಗಳನ್ನು ನಿರ್ಮಾಣ ಮಾಡಲು ಯಾವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂಬುದರ ವಿವರವಾದ ಮಾಹಿತಿ ನೀಡಬೇಕು. ಅಲ್ಲದೇ ಕೊಳಚೆ ನೀರು ನದಿಗೆ ಸೇರುತ್ತಿರುವುದನ್ನು ಗುರುತಿಸಿ ಅದನ್ನು ಪೈಪ್‌ಗಳ ಮೂಲಕ ಎಸ್ಟಿಪಿಗೆ ಹೋಗುವ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ವೃಷಭಾವತಿ ವ್ಯಾಲಿಗೆ ಹೊಂದಿಕೊಂಡಂತೆ 42 ಕೆರೆಗಳು ಬರಲಿದ್ದು, ಒತ್ತುವರಿಯಾಗಿರುವ ಪ್ರದೇಶವನ್ನು ಗುರುತಿಸಬೇಕು. ಜಿಲ್ಲಾಧಿಕಾರಿಗಳ ಬಳಿ ಬಾಕಿಯಿರುವ ಪ್ರಕರಣಗಳ ಪೈಕಿ ಭೂಮಾಪಕರಿಂದ ಸಮೀಕ್ಷೆ ನಡೆಸಿ, ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಬೇಕು ಎಂದು ಸೂಚನೆ ನೀಡಿದರು.
ವೃಷಭಾವತಿ ವ್ಯಾಲಿಗೆ ಕಸ ಹಾಕದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿರುವ ಕಡೆ ಫೆನ್ಸಿಂಗ್ ಅಳವಡಿಸುವ ಕೆಲಸ ಮಾಡಬೇಕು. ಇನ್ನು ಜೆಸಿಬಿಗಳನ್ನು ಇಟ್ಟು ಹೂಳೆತ್ತುವ ಕಾರ್ಯವನ್ನು ನಡೆಸಬೇಕು. ವೃಷಭಾವತಿ ವ್ಯಾಲಿಯಲ್ಲಿ ಸಂಪೂರ್ಣವಾಗಿ ಹೂಳೆತ್ತಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು ಎಂದು ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ 28.08 ಕಿ.ಮೀ ವ್ಯಾಪ್ತಿಯಲ್ಲಿ ವೃಷಭಾವತಿ ವ್ಯಾಲಿ ಬರಲಿದೆ. ವಿ -100 ವ್ಯಾಲಿ ಸ್ಯಾಂಕಿ ಕೆರೆಯಿಂದ ಬೆಂಗಳೂರು ವಿಶ್ವವಿದ್ಯಾಲಯದವರೆಗೆ 14.04 ಕಿ.ಮೀ ಬರಲಿದ್ದು, ವಿ-200 ವ್ಯಾಲಿ ಗೊರಗುಂಟೆ ಪಾಳ್ಯ(ಪೀಣ್ಯ ಮೆಟ್ರೊ ನಿಲ್ದಾಣ)ದಿಂದ ಬೆಂಗಳೂರು ವಿಶ್ವವಿದ್ಯಾಲಯದವರೆಗೆ 14.04 ಕಿ.ಮೀ ಚಾಚಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ವಲಯ ಆಯುಕ್ತೆ ರಮ್ಯಾ, ಪ್ರಧಾನ ಅಭಿಯಂತರ ಡಾ. ಬಿ.ಎಸ್ ಪ್ರಹ್ಲಾದ್, ಕೆರೆಗಳ ವಿಭಾಗದ ಮುಖ್ಯ ಆಭಿಯಂತರ ವಿಜಯ್ ಕುಮಾರ್ ಹರಿದಾಸ್, ಪಾಲಿಕೆ, ಜಲಮಂಡಳಿ, ಕೆ.ಎಸ್.ಪಿ.ಸಿ.ಬಿ ಸೇರಿದಂತೆ ಇನ್ನಿತರ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ :ಬಿಬಿಎಂಪಿ ವ್ಯಾಪ್ತಿಯ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ಟೆಂಡರ್ ರದ್ದು ಸೇರಿ ಸಚಿವ ಸಂಪುಟದ ನಿರ್ಣಯಗಳು - KARNATAKA CABINET MEETING