ಬೆಂಗಳೂರು: ಬಿಬಿಎಂಪಿಯಿಂದ ಅನುಮತಿ ಪಡೆಯದೆಯೇ ಅನಧಿಕೃತವಾಗಿ ರಸ್ತೆಯ ಬಳಿ ಕೊಳವೆಬಾವಿ ಕೊರೆಸಿದ ಹಾಗೂ ಆಸ್ತಿ ಹಾನಿ ಮಾಡಿರುವ ಕುರಿತು ಪ್ರತ್ಯೇಕವಾಗಿ ಎರಡು ಎಫ್ಐಆರ್ಗಳನ್ನು ದಾಖಲಿಸಲಾಗಿದೆ.
ನಗರದಲ್ಲಿ ಕೊಳವೆ ಬಾವಿಗಳನ್ನು ಕೊರೆಸಲು ಅನುಮತಿ ಪಡೆಯಬೇಕಾಗಿದ್ದು, ಅನುಮತಿ ಸಿಕ್ಕಿ ಕೊಳವೆಬಾವಿಯಲ್ಲಿ ನೀರು ಸಿಗದಿದ್ದರೆ, ಯಾವುದೇ ಅನಾಹುತ ಸಂಭವಿಸದಂತೆ ಅದನ್ನು ಮುಚ್ಚಬೇಕು ಎನ್ನುವ ಹಲವು ನಿಯಮಗಳಿವೆ. ಇವುಗಳ ಹೊರತಾಗಿ ಆರ್.ಆರ್ ನಗರದ ಹೇರೋಹಳ್ಳಿ ವಾರ್ಡ್‌ನ ವೀರಭದ್ರೇಶ್ವರ ನಗರ ಓಂ ಸಾಯಿ ಪಬ್ಲಿಕ್ ಮುಖ್ಯರಸ್ತೆಯಲ್ಲಿ ಅನಧಿಕೃತವಾಗಿ ಕೊಳವೆಬಾವಿ ಕೊರೆಸಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಭೇಟಿ ನೀಡಿದ್ದು, ಪಾಲಿಕೆ ಅನುಮತಿ ಇಲ್ಲದೇ ಅ. 3 ರಿಂದ 4ರ ಸಂಜೆವರೆಗೆ ಕೊಳವೆಬಾವಿ ಕೊರೆಸಿರುವ ಮಾಹಿತಿ ಲಭ್ಯವಾಗಿದೆ. ಈ ವೇಳೆ ಸಾರ್ವಜನಿಕ ರಸ್ತೆಯನ್ನೂ ಅಗೆದು ಹಾಳು ಮಾಡಲಾಗಿದೆ. ಈ ಕುರಿತು ಅ.4ರಂದು ಪಾಲಿಕೆ ಅಧಿಕಾರಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ದೂರಿನಲ್ಲಿ ಕೊಳವೆಬಾವಿ ಕೊರೆಸಿದವರ ಹಾಗೂ ಕೊರೆಯುವ ವಾಹನದ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದು, ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಆಸ್ತಿ ಹಾನಿ ಪ್ರಕರಣ:ಆರ್.ಆರ್ ನಗರ ವಲಯದ ಕೆಂಚೇನಹಲ್ಲಿಯ ಐಡಿಯಲ್ ಹೋಮ್ಸ್ ಪೆಟ್ರೋಲ್ ಬಂಕ್ ಬಳಿ ಮಂಜೇಗೌಡ ಎಂಬುವವರು ಕಟ್ಟಡ ನಿರ್ಮಿಸಲು ನಕ್ಷೆ ಮಂಜೂರಾತಿ ಪಡೆಯದೆ ಸುಮಾರು 6 ರಿಂದ 8 ಅಡಿ ಆಳ ತಳಪಾಯದ ಕಾಮಗಾರಿ ನಡೆಸಿದ್ದಾರೆ. ಇದರಿಂದ 70 ಅಡಿ ಉದ್ದದಷ್ಟು ಪಾದಚಾರಿ ರಸ್ತೆ ಹಾಗೂ ಒಳಚರಂಡಿಯು ಕುಸಿದು ಬಿದ್ದಿದ್ದು, ಸಾರ್ವಜನಿಕರ ಸಂಚಾರಕ್ಕೆ ಸಮಸ್ಯೆಯಾಗಿದೆ. ಅಲ್ಲದೇ ಒಳಚರಂಡಿ ಮುಂಭಾಗದಲ್ಲಿರುವ ಬಿಎಂಟಿಸಿ ಬಸ್ ನಿಲ್ದಾಣ ಸಹ ಕುಸಿಯುವ ಸಂಭವವಿರುವುದರಿಂದ ಇಲಾಖೆಗೆ ಸರಿ ಸುಮಾರು 20 ಲಕ್ಷದವರೆಗೆ ನಷ್ಟ ಉಂಟಾಗಲಿದೆ. ಹೀಗಾಗಿ ಕಟ್ಟಡ ಕಾಮಗಾರಿ ವೇಳೆಯಲ್ಲಿ ಯಾವುದೇ ಮುಂಜಾಗ್ರತ ಕ್ರಮ ಅನುಸರಿಸದೆ ಕಾಮಗಾರಿ ಮಾಡುತ್ತಿರುವ ಕಾರಣ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗುವ ಸಾಧ್ಯತೆ ಇದೆ. ಹಾಗಾಗಿ ಕಟ್ಟಡ ಮಾಲೀಕರ ಮೇಲೆ ಆರ್.ಆರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ನಕಲಿ ದಾಖಲೆಯಿಂದ 70 ಕೋಟಿ ಆಸ್ತಿಗೆ ಪರಿಹಾರ ಪಡೆಯಲು ಯತ್ನ ಆರೋಪ: 19 ಮಂದಿ ವಿರುದ್ಧ ಎಫ್ಐಆರ್ - Fake Document Case