ಕರ್ನಾಟಕ

karnataka

ನೀತಿ ಆಯೋಗದ ಜೊತೆ ಸಭೆ: ಪ್ರಗತಿಪರ ಮತ್ತು ಸಮೃದ್ಧ ಭಾರತಕ್ಕೆ ಕೊಡುಗೆ ನೀಡಲು ನಮ್ಮ ರಾಜ್ಯ ಬದ್ಧ - ಸಿಎಂ - NITI Aayoga

By ETV Bharat Karnataka Team

Published : Aug 27, 2024, 10:13 PM IST

ನೀತಿ ಆಯೋಗದ ಉಪಾಧ್ಯಕ್ಷ ಸುಮನ್ ಬೆರಿ ಜೊತೆ ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಿದರು. ಈ ವೇಳೆ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ವಿವರಿಸಿದರು. ಅಲ್ಲದೆ, ಸರ್ಕಾರಕ್ಕಿರುವ ಆರ್ಥಿಕ ಬೆಳವಣಿಗೆಯ ಬದ್ಧತೆ ಕುರಿತು ತಿಳಿಸಿದರು.

ನೀತಿ ಆಯೋಗದ ಜೊತೆ ಸಿಎಂ ಸಭೆ
ನೀತಿ ಆಯೋಗದ ಜೊತೆ ಸಿಎಂ ಸಭೆ (ETV Bharat)

ಬೆಂಗಳೂರು: ಪ್ರಗತಿಪರ ಮತ್ತು ಸಮೃದ್ಧ ಭಾರತದ ಸಾಮೂಹಿಕ ದೃಷ್ಟಿಗೆ ಕೊಡುಗೆ ನೀಡಲು ನಮ್ಮ ರಾಜ್ಯ ಬದ್ಧವಾಗಿದೆ. ನಮ್ಮ ಸಾಮಾನ್ಯ ಗುರಿಗಳನ್ನು ಸಾಧಿಸಲು ಮತ್ತು ಸಕಾರಾತ್ಮಕ ಪರಿಣಾಮ ಬೀರಲು ಎಲ್ಲಾ ಪಾಲುದಾರರೊಂದಿಗೆ ಒಟ್ಟಾಗಿ ಕೆಲಸ ಮಾಡಲು ಕೂಡ ನಾವು ಬದ್ಧರಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ನೀತಿ ಆಯೋಗ ಉಪಾಧ್ಯಕ್ಷ ಸುಮನ್ ಬೆರಿ ಜೊತೆಗಿನ‌ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಯನ್ನು ಪ್ರೋತ್ಸಾಹಿಸಲು ನಮ್ಮ ರಾಜ್ಯ ಆಡಳಿತವನ್ನು ಉತ್ತಮಪಡಿಸಲು ಮತ್ತು ಸ್ಥಳೀಯವಾದ ಸವಾಲುಗಳನ್ನು ಎದುರಿಸಲು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಕೆಲಸ ನೀತಿ ಆಯೋಗ ಮತ್ತು ಭಾರತ ಸರ್ಕಾರ ವಿವರಿಸಿರುವ ಉದ್ದೇಶಗಳಿಗೆ ಅನುಗುಣವಾಗಿದ್ದರೂ, ತಳಭಾಗದಲ್ಲಿರುವ 60% ರಷ್ಟು ಜನಸಂಖ್ಯೆಯನ್ನು, ಆದಾಯದ ದೃಷ್ಟಿಯಿಂದ, ಅಭಿವೃದ್ಧಿ ಕಾರ್ಯಸೂಚಿಯಲ್ಲಿ ಸೇರಿಸುವ ನಿಟ್ಟಿನಲ್ಲಿ ಹಲವು ಹೆಜ್ಜೆಗಳಷ್ಟು ಮುಂದೆ ಇದ್ದೇವೆ ಎಂದು ತಿಳಿಸಿದ್ದಾರೆ.

ಆರ್ಥಿಕ ಬೆಳವಣಿಗೆಗೆ ನಮಗಿರುವ ಬದ್ಧತೆ ಅಚಲವಾದುದು. ಸುಸ್ಥಿರ ಅಭಿವೃದ್ಧಿಯನ್ನು ಕೈಗೊಳ್ಳಲು ನಾವು ನಮ್ಮ ರಾಜ್ಯದ ಅನನ್ಯ ಸಾಮರ್ಥ್ಯ ಮತ್ತು ಸಂಪನ್ಮೂಲಗಳನ್ನು ಬಳಸಿಕೊಳ್ಳುವತ್ತ ಗಮನಹರಿಸಿದ್ದೇವೆ. ಮೂಲಸೌಕರ್ಯವನ್ನು ಬಲಪಡಿಸುವುದರಿಂದ ಹಿಡಿದು ಉದ್ಯಮಶೀಲತೆಯನ್ನು ಉತ್ತೇಜಿಸುವವರೆಗೆ ನಾವೀನ್ಯತೆಯನ್ನು ಪೋಷಿಸುವ ಹಾಗೂ ಹೂಡಿಕೆಯನ್ನು ಆಕರ್ಷಿಸುವ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವತ್ತ ನಾವು ಕಾರ್ಯೋನ್ಮುಖರಾಗಿದ್ದೇವೆ. ಕೃಷಿ, ಪ್ರವಾಸೋದ್ಯಮ, ಉತ್ಪಾದನೆ, ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳು ಇತ್ಯಾದಿ ವಲಯಗಳ ಅಭಿವೃದ್ಧಿಗೂ ನಾವು ಆದ್ಯತೆ ನೀಡಿದ್ದೇವೆ ಎಂದರು.

ಪಂಚ ಗ್ಯಾರಂಟಿ ಬಗ್ಗೆ ವಿವರಣೆ:ಸಮಾನ ಬೆಳವಣಿಗೆಯ ನಮ್ಮ ದೃಷ್ಟಿಗೆ ಅನುಗುಣವಾಗಿ 1.2 ಕೋಟಿ ಕುಟುಂಬಗಳಿಗೆ ನೇರ ಸೌಲಭ್ಯ ವರ್ಗಾವಣೆ ಮೂಲಕ ನೇರ ಆದಾಯ ಬೆಂಬಲವನ್ನು ನೀಡುವ ಮಾಹತ್ವಾಕಾಂಕ್ಷಿ ಕಾರ್ಯಕ್ರಮವನ್ನು ನಾವು ಜಾರಿ ಮಾಡಿದ್ದೇವೆ. ಇದನ್ನು ನಾವು ಐದು ಗ್ಯಾರಂಟಿಗಳು ಎಂದು ಕರೆಯುತ್ತೇವೆ.

ಗೃಹ ಲಕ್ಷ್ಮಿ ಯೋಜನೆ - ಪ್ರತಿ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ರೂ. 2000 ಮಾಸಿಕ ನಗದು ಬೆಂಬಲದ ಈ ಕಾರ್ಯಕ್ರಮವು 1.2 ಕೋಟಿ ಮಹಿಳೆಯರನ್ನು ಅವರ ಬ್ಯಾಂಕ್ ಖಾತೆಗಳಿಗೆ DBT ಮೂಲಕ ತಲುಪುತ್ತದೆ. ಗೃಹ ಜ್ಯೋತಿ ಯೋಜನೆ - 200 ಯೂನಿಟ್‌ಗಳವರೆಗೆ ವಿದ್ಯುತ್ ಬಳಕೆ ಮಾಡುವ ಕುಟುಂಬಗಳಿಗೆ ಉಚಿತ ಗೃಹ ವಿದ್ಯುತ್, 1.4 ಕೋಟಿ ಕುಟುಂಬಗಳಿಗೆ ಇದರಿಂದ ಪ್ರಯೋಜನವಾಗುತ್ತಿದೆ ಎಂದು ವಿವರಿಸಿದ್ದಾರೆ.

ಅನ್ನ ಭಾಗ್ಯ ಯೋಜನೆ- ಪ್ರತಿ ವ್ಯಕ್ತಿಗೆ ತಿಂಗಳಿಗೆ 10 ಕೆಜಿ ಧಾನ್ಯವನ್ನು ಉಚಿತವಾಗಿ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಎನ್‌ಎಫ್‌ಎಸ್‌ಎ ಅಡಿಯಲ್ಲಿ ಉಚಿತವಾಗಿ ನೀಡುವ 5 ಕೆಜಿ ಅಕ್ಕಿಯ ಜೊತೆಗೆ ಇನ್ನೂ 5 ಕೆಜಿ ಧಾನ್ಯವನ್ನು ನೀಡುವುದಾಗಿ ಭರವಸೆ ನೀಡಲಾಯಿತು. ಧಾನ್ಯ ಲಭ್ಯವಾಗದ ಕಾರಣ, ಧಾನ್ಯದ ಬದಲಾಗಿ ಪ್ರತಿ ವ್ಯಕ್ತಿಗೆ ತಿಂಗಳಿಗೆ 170 ರೂ ನಗದು ನೀಡುತ್ತಿದ್ದೇವೆ. 1.2 ಕೋಟಿ ಕುಟುಂಬಗಳು ಈ ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಿವೆ. ಶಕ್ತಿ ಯೋಜನೆ- ಕರ್ನಾಟಕದ ಎಲ್ಲಾ ಮಹಿಳೆಯರಿಗೆ ಸಾರ್ವಜನಿಕ ಬಸ್ಸುಗಳಲ್ಲಿ ಉಚಿತ ಬಸ್ ಪ್ರಯಾಣ ಒದಗಿಸುವ ಶಕ್ತಿ ಕಾರ್ಯಕ್ರಮದಡಿಯಲ್ಲಿ ಇದುವರೆಗೆ ಕರ್ನಾಟಕದ ಮಹಿಳೆಯರು ಸುಮಾರು 280 ಕೋಟಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಈ ಕಾರ್ಯಕ್ರಮವು ಮಹಿಳೆಯರನ್ನು ಅಕ್ಷರಶ: ಸ್ವಾವಲಂಬಿಯಾಗಿಸಿದೆ ಎಂದು ತಿಳಿಸಿದರು.

ಯುವ ನಿಧಿ- ಪ್ರತಿ ನಿರುದ್ಯೋಗಿ ಪದವೀಧರರಿಗೆ ಮಾಸಿಕ ರೂ 3,000 ಮತ್ತು ಡಿಪ್ಲೊಮಾ ಹೊಂದಿರುವವರಿಗೆ ರೂ. 1500 ಮಾಸಿಕ ಸ್ಟೈಫಂಡ್ ಅನ್ನು 2 ವರ್ಷಗಳವರೆಗೆ ಅಥವಾ ವ್ಯಕ್ತಿಯು ಉದ್ಯೋಗವನ್ನು ಕಂಡುಕೊಳ್ಳುವವರೆಗೆ ನೀಡಲಾಗುತ್ತದೆ. ಇದುವರೆಗೆ ಒಟ್ಟು 1.31 ಲಕ್ಷ ಯುವಕರು ಈ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. 5 ಗ್ಯಾರಂಟಿಗಳಿಗೆ ನಾವು ವರ್ಷಕ್ಕೆ 52,000 ಕೋಟಿಗೂ ಹೆಚ್ಚು ವೆಚ್ಚ ಮಾಡುತ್ತಿದ್ದೇವೆ. ಬಹುಶಃ ಇದು ಯಾವುದೇ ರಾಜ್ಯ ಸರ್ಕಾರ ನೀಡುತ್ತಿರುವ ಅತಿದೊಡ್ಡ ಆದಾಯ ಬೆಂಬಲದ ಉಪಕ್ರಮವಾಗಿದೆ ಎಂದು ವಿವರಿಸಿದ್ದಾರೆ.

ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ:ನಮ್ಮ ಅಭಿವೃದ್ಧಿ ಕಾರ್ಯತಂತ್ರದಲ್ಲಿ ಸುಸ್ಥಿರತೆ ಕೇಂದ್ರಬಿಂದುವಾಗಿದೆ. ಪರಿಸರ ಸಂರಕ್ಷಣೆಗೆ ನಾವು ಬದ್ಧರಾಗಿದ್ದು ಇಂಗಾಲದ ಹೆಜ್ಜೆ ಗುರುತುಗಳನ್ನು ಕಡಿಮೆ ಮಾಡುವ ನೀತಿಗಳನ್ನು ಅನುಷ್ಠಾನಗೊಳಿಸುತ್ತಿದ್ದೇವೆ. ಉದಾಹರಣೆಗೆ, ನವೀಕರಿಸಬಹುದಾದ ಇಂಧನ ವಲಯದಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ನಮ್ಮ ಸ್ಥಾಪಿತ ಸಾಮರ್ಥ್ಯದ ಶೇ.53 ರಷ್ಟು ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ಲಭಿಸುತ್ತಿದೆ. ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸುಸ್ಥಿರ ಕೃಷಿ ಅಭ್ಯಾಸಗಳನ್ನು ಪ್ರೋತ್ಸಾಹಿಸುವುದು ನಮ್ಮ ಪ್ರಯತ್ನಗಳಲ್ಲಿ ಸೇರಿದೆ. ದೀರ್ಘಕಾಲಿಕ ಸಮೃದ್ಧಿ ಮತ್ತು ಉತ್ತಮ ಗುಣಮಟ್ಟದ ಜೀವನಕ್ಕಾಗಿ ಪರಿಸರದ ಮಹತ್ವವನ್ನು ನಾವು ಗುರುತಿಸಿದ್ದೇವೆ ಎಂದಿದ್ದಾರೆ.

ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಪರಿಣಾಮಕಾರಿ ಆಡಳಿತವೇ ಮುಖ್ಯ. ನಮ್ಮ ಆಡಳಿತ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ನಾವು ತಂತ್ರಜ್ಞಾನ ಮತ್ತು ನಾವೀನ್ಯತಾ ಪರಿಹಾರಗಳಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ಉದಾಹರಣೆಗೆ ನಮ್ಮಲ್ಲಿ ಪ್ರಬಲವಾಗಿರುವ ಇ –ಆಡಳಿತ ಪರಿಹಾರಗಳು ಲಭ್ಯವಿದೆ. ಇವುಗಳನ್ನು ಬಳಿಸಿಕೊಂಡು ಮೂರು ತಿಂಗಳೊಳಗಿನ ದಾಖಲೆ ಸಮಯದಲ್ಲಿ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಸಾಧ್ಯವಾಯಿತು. ಡಿಬಿಟಿ ಮಾಡ್ಯೂಲ್ ಬಳಕೆಯ ಮೂಲಕ 54,000 ಕೋಟಿ ರೂ.ಗಳನ್ನು ಫಲಾನುಭವಿಗಳಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಿದ್ದೇವೆ ಎಂದು ತಿಳಿಸಿದರು.

ನೀತಿ ಆಯೋಗದ ಜೊತೆಗಿನ ನಮ್ಮ ಪಾಲುದಾರಿಕೆಯು ನಮ್ಮ ಅಭಿವೃದ್ಧಿ ತಂತ್ರಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆಯೋಗವು ಒದಗಿಸಿರುವ ಮಾರ್ಗದರ್ಶನ ಮತ್ತು ಬೆಂಬಲವನ್ನು ನಾವು ಮೆಚ್ಚುವುದಲ್ಲದೆ ವಿವಿಧ ಯೋಜನೆಗಳಲ್ಲಿ ಈ ಸಹಯೋಗವನ್ನು ಮುಂದುವರಿಸಲು ಉತ್ಸುಕರಾಗಿದ್ದೇವೆ. ಜ್ಞಾನ ಹಂಚಿಕೆ, ಸಂಪನ್ಮೂಲಗಳು ಮತ್ತು ಪರಿಣತಿಯ ಮೂಲಕ ಸವಾಲುಗಳನ್ನು ಎದುರಿಸಬಹುದು ಹಾಗೂ ಬೆಳವಣಿಗೆಗೆ ಹೊಸ ಅವಕಾಶಗಳನ್ನೇ ತೆರೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಲೈವ್ Karnataka News Today Live: ಒಂದೇ ಕ್ಲಿಕ್​ನಲ್ಲಿ ಕರ್ನಾಟಕದ ಇಂದಿನ ಪ್ರಮುಖ ಸುದ್ದಿಗಳ ಮಾಹಿತಿ - Live Updates

ABOUT THE AUTHOR

...view details