ಮೈಸೂರು: ಸುಳ್ಳು ಹೇಳಿದರೆ ಜನ ಮೋದಿ ಮೋದಿ ಅಂತಾರೆ ಎನ್ನುವುದು ಅವರಿಗೆ ಗೊತ್ತಾಗಿದೆ. ಹೀಗಾಗಿ ಅವರು ಸುಳ್ಳು ಹೇಳೋದನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಇಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕೃಷ್ಣರಾಜದಲ್ಲಿ ನಡೆದ ಜನಧ್ವನಿ-2 ಯಾತ್ರೆಯ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಧಾನಿ ಪ್ರತಿಯೊಬ್ಬ ಭಾರತೀಯರ ಖಾತೆಗೆ ₹ 15 ಲಕ್ಷ ಹಾಕ್ತೀನಿ ಅಂದ್ರು, ವಿದೇಶದಿಂದ ಕಪ್ಪು ಹಣ ತರ್ತೀನಿ ಅಂದ್ರು, ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದ್ರು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರು. ಡೀಸೆಲ್- ಪೆಟ್ರೋಲ್-ಗ್ಯಾಸ್-ರಸಗೊಬ್ಬರದ ಬೆಲೆ ಕಡಿಮೆ ಮಾಡ್ತೀವಿ ಅಂದ್ರು, ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಿಸ್ತೀವಿ ಅಂದರು. ಹೀಗೆ ರಾಶಿ ರಾಶಿ ಸುಳ್ಳುಗಳ ಮೂಲಕವೇ ಭಾರತೀಯರನ್ನು ನಿರಂತರವಾಗಿ ಮೂರ್ಖರನ್ನಾಗಿ ಮಾಡಿ ವಂಚಿಸಿದ್ದಾರೆ ಎಂದು ದೂರಿದರು. 10 ವರ್ಷಗಳ ಕಾಲ ನಿಮ್ಮನ್ನು ವಂಚಿಸಿದವರಿಗೆ ಮತ ಹಾಕೋಕೆ ನಿಮಗೆ ಮನಸ್ಸು ಬರುತ್ತಾ ಎಂದು ಪ್ರಶ್ನಿಸಿದರು.
ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಮಾಡಿದವರು ಯಾರು, ಮಹಿಳಾ-ಮಕ್ಕಳ ಆಸ್ಪತ್ರೆ ಮಾಡಿದವರು ಯಾರು, ಶಾಲೆ-ಹಾಸ್ಟೆಲ್ಗಳನ್ನು ಮಾಡಿದವರು ಯಾರು, ಮೈಸೂರಿನ ಅಭಿವೃದ್ಧಿಗೆ ಸಾವಿರಾರು ಕೋಟಿ ಹಣ ಕೊಟ್ಟ ಸರ್ಕಾರ ಯಾವುದು ಎನ್ನುವುದು ಮೈಸೂರಿನ ಪ್ರತಿ ಪ್ರಜ್ಞಾವಂತರಿಗೂ ಗೊತ್ತು. ನಾವು ಮಾಡಿದಷ್ಟು ಕೆಲಸವನ್ನು ಮಾಡಲು ಬಿಜೆಪಿಗೂ ಅವಕಾಶ ಇತ್ತು, ಜನ ಅವಕಾಶ ಕೊಟ್ಟಿದ್ದರು. ಆದರೆ ಅವಕಾಶ ಸಿಕ್ಕರೂ ಬಿಜೆಪಿ ಸಂಸದರು ಕೆಲಸ ಮಾಡಲಿಲ್ಲ. ಹೀಗಾಗಿ ನುಡಿದಂತೆ ನಡೆದು ಅಭಿವೃದ್ಧಿಯ ದಿಕ್ಕಲ್ಲಿ ಮುನ್ನುಗ್ಗುತ್ತಿರುವ ನಮಗೆ ಅವಕಾಶ ಕೊಡಿ. ಸಾಮಾನ್ಯ ಕಾರ್ಯಕರ್ತರಾಗಿ ಹೋರಾಟ, ಪ್ರತಿಭಟನೆಗಳಿಂದ ಬೆಳೆದ ಎಂ.ಲಕ್ಷ್ಮಣ್ ಅವರನ್ನು ಈ ಬಾರಿ ಗೆಲ್ಲಿಸಿ ಎಂದು ಕರೆ ನೀಡಿದರು.