ರಾಯಚೂರು:ಪೊಲೀಸ್ ಪೇದೆಯ ಮೇಲೆ ನಡೆದ ಹಲ್ಲೆ ಪ್ರಕರಣ ಸಂಬಂಧ ಎಂಟು ಜನರ ವಿರುದ್ಧ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತೋಷ, ತಿಮ್ಮಾರೆಡ್ಡಿ, ಮಲ್ಲಪ್ಪ, ರಫಿಕ್, ಇಲಿಯಾಸ್, ದಾವೂದ್ ಆವಂಟಿ, ಭೀಮಣ್ಣ ತಳವಾರದೊಡ್ಡಿ, ರಮೇಶ ನಾಯಕ ಕರ್ಕಿಹಳ್ಳಿ ಹಲ್ಲೆ ಮಾಡಿದ ಆರೋಪಿಗಳು. ಸಂತೋಷ ಎ1 ಆರೋಪಿಯಾಗಿದ್ದು ಪೊಲೀಸ್ ಕಾನ್ಸ್ಟೇಬಲ್ ಹನುಮಂತರಾಯ ಅವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ. ಆರೋಪಿಗಳು ರಾಜಕೀಯ ಹಿನ್ನೆಲೆ ಉಳ್ಳವರಾಗಿದ್ದಾರೆ.
''2024 ಫೆ.11ರಂದು ದೊಂಡಂಬಳಿಯ ಬಳಿ ಕೃಷ್ಣಾ ನದಿಯಿಂದ ಅಕ್ರಮವಾಗಿ ಟ್ರ್ಯಾಕ್ಟರ್ ಮೂಲಕ ಮರಳು ಸಾಗಾಟ ಮಾಡುತ್ತಿದೆ ಎಂಬ ಖಚಿತ ಮಾಹಿತಿ ಬಂದಿತ್ತು. ಈ ಮಾಹಿತಿ ಮೇರೆಗೆ ದೇವದುರ್ಗ ಠಾಣಾಧಿಕಾರಿ ಜೊತೆಯಲ್ಲಿ ಪೊಲೀಸ್ ಸಿಬ್ಬಂದಿ ತಂಡ ರಚಿಸಿಕೊಂಡು ಘಟನಾ ಸ್ಥಳಕ್ಕೆ ತೆರಳಲಾಗಿತ್ತು. ಈ ವೇಳೆ ಎರಡು ಟ್ರ್ಯಾಕ್ಟರ್ಗಳು ಮರಳು ತುಂಬಿಕೊಂಡು ಹೋಗುತ್ತಿದ್ದವು. ನಮ್ಮನ್ನು ನೋಡಿದಾಗ, ಚಾಲಕರು ಟ್ರ್ಯಾಕ್ಟರ್ ಬಿಟ್ಟು ಓಡಿ ಹೋದರು. ಬಳಿಕ ಟ್ರ್ಯಾಕ್ಟರ್ ಜಪ್ತಿ ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಯಿತು. ತಕ್ಷಣ ರಾಜಕೀಯ ಮುಖಂಡರೊಬ್ಬರು ಠಾಣೆಗೆ ಕರೆ ಮಾಡಿ ಪ್ರಕರಣ ಸಂಬಂಧ ಇನ್ನಷ್ಟು ಮಾತನಾಡುವುದಿದೆ, ದೇವದುರ್ಗ ಪಟ್ಟಣದ ಪ್ರವಾಸಿ ಮಂದಿರ(ಐಬಿ)ಗೆ ಬರುವಂತೆ ಹೇಳಿದ್ದರು. ಅವರ ಮಾತಿನಂತೆ ನಾನು ಐಬಿಗೆ ತೆರಳಿದೆ. ಇವರೆಲ್ಲರೂ ಅಲ್ಲಿ ಹಾಜರಿದ್ದರು. ಈ ವೇಳೆ ನಮ್ಮ ಟ್ರ್ಯಾಕ್ಟರ್ಗಳನ್ನು ಹೇಗೆ ವಶಕ್ಕೆ ಪಡೆದೆ ಎಂದು ಇಲ್ಲ-ಸಲ್ಲದ ಮಾತುಗಳನ್ನು ಆಡುತ್ತಾ ಅಶ್ಲೀಲ ಪದಗಳನ್ನು ಬಳಸಿದರು. ಸಾಲದೆಂಬಂತೆ ನನ್ನ ಮೇಲೆ ಹಲ್ಲೆ ಮಾಡಲು ಮುಂದಾದರು. ಈ ವೇಳೆ ನಾನು ಅಲ್ಲಿಂದ ತಪ್ಪಿಸಿಕೊಳ್ಳುವ ಹರಸಾಹಸ ಮಾಡಿದೆ. ಆದರೆ, ರೂಮಿನಲ್ಲಿ ಕೂಡಿ ಹಾಕಿ ನನ್ನ ಮೇಲೆ ಹೊಡಿಬಡಿ ಮಾಡಿದರು. ಮುಂದೆ ಯಾವತ್ತಾದರೂ ನಮ್ಮ ಟ್ರ್ಯಾಕ್ಟರ್ಗಳನ್ನು ವಶಕ್ಕೆ ಪಡೆದದ್ದು ಆದಲ್ಲಿ ನಿನ್ನ ಜೀವಸಹಿತ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿ ಕಳಿಸಿದ್ದಾರೆ'' ಎಂದು ಕಾನ್ಸ್ಟೇಬಲ್ ಹನುಮಂತರಾಯ ದೂರು ನೀಡಿದ್ದಾರೆ.