ಮಂಗಳೂರು:ಕರಾವಳಿಯ ಜಾನಪದ ಕ್ರೀಡೆ ಕಂಬಳದಲ್ಲಿ ಕಂಬಳ ಕೋಣಗಳಿಗೆ ಬಹಳ ಮಹತ್ವ. ಕಂಬಳ ಕೋಣಗಳ ಯಜಮಾನರು ಕಂಬಳ ಕೋಣವನ್ನು ತಮ್ಮ ಮನೆಯ ಸದಸ್ಯನಂತೆ ಸಾಕುತ್ತಾರೆ. ಕೋಣಗಳು ಕೂಡ ಮನೆ ಯಜಮಾನನಿಗೆ ಕಂಬಳದಲ್ಲಿ ಗೌರವ ತಂದುಕೊಡುತ್ತವೆ. ಕಂಬಳದಲ್ಲಿ ಬಹಳಷ್ಟು ಹೆಸರು ಮಾಡಿದ ಕೋಣ ದೂಜ. ಇದೀಗ ಆರೋಗ್ಯ ಸಮಸ್ಯೆಯಿಂದ ದೂಜ ಕಂಬಳ ಕರೆಯಲ್ಲಿ ಓಡುವುದನ್ನು ನಿಲ್ಲಿಸಿದ್ದಾನೆ.
"ಅಲೆ ಬುಡಿಯೆರ್‌ಗೇ.." ಎಂಬ ಉದ್ಘಾರ ಕೇಳುತ್ತಿದ್ದಂತೆ ಕಂಬಳ ಕರೆಯಲ್ಲಿ ದೂಜ ಓಟಕ್ಕೆ ನಿಂತರೆ ಮೆಡಲ್ ಗೆದ್ದನೆಂದೇ ಲೆಕ್ಕ. ಅಂತಹ ದೂಜ ಅನಾರೋಗ್ಯದಿಂದಾಗಿ ಒಂದೆರಡು ವರ್ಷಗಳಿಂದ ಕಂಬಳ ಕರೆಗೆ ಇಳಿದಿಲ್ಲ. ಸದ್ಯ ಆರೋಗ್ಯದಿಂದಿದ್ದರೂ ಇನ್ಮುಂದೆ ದೂಜ ಕಂಬಳ ಕರೆಗೆ ಇಳಿಯುವುದಿಲ್ಲ ಎಂಬ ಸುದ್ದಿ ಇದೀಗ ಕಂಬಳ ಅಭಿಮಾನಿಗಳಿಗೆ ನಿರಾಸೆ ತಂದಿದೆ.
ಆರೋಗ್ಯವಿದ್ದರೆ ಕೋಣಗಳು ಸರಾಸರಿ 20ವರ್ಷ ಪ್ರಾಯದವರೆಗೆ ಕಂಬಳ ಕರೆಯಲ್ಲಿ ಓಡುತ್ತವೆ. ಆದರೆ ದೂಜನಿಗೆ ಎರಡು ವರ್ಷಗಳ ಹಿಂದೆ ಆರೋಗ್ಯ ಕೈಕೊಟ್ಟಿತ್ತು. ಎದ್ದು ನಿಲ್ಲಲಾರದಷ್ಟು ಸಹ ಅಶಕ್ತನಾದ. ಬಳಿಕ ನಡೆದ ಚಿಕಿತ್ಸೆಯಿಂದ ಆರೋಗ್ಯವಂತನಾದರೂ ಓಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇನ್ಮುಂದೆ ಆತ ಕಂಬಳ ಕರೆಗೆ ಇಳಿಯುವುದು ಸ್ವಲ್ಪ ಕಷ್ಟವೇ ಆಗಿದೆ.
ಮಂಗಳೂರಿನ ಶಕ್ತಿನಗರ ಪದವು - ಕಾನಡ್ಕದ ಯಜಮಾನರು ದೂಜ ಕೋಣವನ್ನು ಅಳದಂಗಡಿ ರವಿಯವರಿಂದ ಖರೀದಿಸಿದ್ದರು. ಪದವು ಕಾನಡ್ಕಕ್ಕೆ ಬರುವಾಗ 2 ವರ್ಷದ ಮರಿ ಕೋಣವಾಗಿದ್ದ ದೂಜನಿಗೆ ಇದೀಗ 16ರ ಪ್ರಾಯ. ಪದವು - ಕಾನಡ್ಕಕ್ಕೆ ಬಂದ ಬಳಿಕವೇ ದೂಜ ಕಂಬಳಕ್ಕೆ ತಯಾರಾಗಿದ್ದು. ಪದವು ಕಾನಡ್ಕ ಫ್ರಾನ್ಸಿಸ್ ಫ್ಲೇವಿ ಡಿಸೋಜರ ಹೆಸರಿನಲ್ಲಿ ದೂಜನನ್ನು ಕಂಬಳ ಕರೆಯಲ್ಲಿ ಓಡಿಸಲಾಗುತ್ತಿತ್ತು. ತಂದೆ ಫ್ರಾನ್ಸಿಸ್ ಅವರ ನಿಧನದ ಬಳಿಕ ಮೂವರು ಮಕ್ಕಳಾದ ಡೋಲ್ಫಿ ಡಿಸೋಜ, ಡೆರಿಕ್ ಡಿಸೋಜ ಹಾಗೂ ನಾಬರ್ಟ್ ಡಿಸೋಜರು ತಾಯಿ ಫ್ಲೇವಿ ಡಿಸೋಜರ ಹೆಸರಿನಲ್ಲಿ ಕೋಣಗಳನ್ನು ಓಡಿಸುತ್ತಿದ್ದಾರೆ.
ನೇಗಿಲು ಕಿರಿಯದಲ್ಲಿ ಚಾಂಪಿಯನ್ ಆಗಿದ್ದ ದೂಜ ಬಳಿಕ ಹಗ್ಗ ಕಿರಿಯ ವಿಭಾಗದಲ್ಲಿ ಚಾಂಪಿಯನ್ ಆಗಿತ್ತು, ಹಗ್ಗ ಹಿರಿಯ ವಿಭಾಗದಲ್ಲಿ ನಾಲ್ಕು ವರ್ಷ ಚಾಂಪಿಯನ್ ಆಫ್ ದಿ ಈಯರ್ ಆಗಿತ್ತು. ಜೊತೆಗೆ ಕಂಬಳ ಓಟದಲ್ಲಿ 69 ಮೆಡಲ್ ಪಡೆದು ದೂಜ ದಾಖಲೆ ಬರೆದಿದ್ದಾನೆ. ಚಾಂಪಿಯನ್ ಸರಣಿ ಪ್ರಶಸ್ತಿ ಪಡೆದ ದೂಜ ತನ್ನ ಮೊದಲ ಕಂಬಳ ಅಲ್ಲಿಯೇ ಸೆಮಿಫೈನಲ್ ಪ್ರವೇಶಿಸಿದ್ದ. ಅಪ್ಪು, ಚೆನ್ನ, ಬೊಲ್ಲ, ಮೋಡೆ ಕೋಣಗಳೊಂದಿಗೆ ಜೊತೆಯಾಗಿ ದೂಜ ಕಂಬಳ ಕರೆಯಲ್ಲಿ ಓಡಿದೆ.