ಬೆಂಗಳೂರು: ದಾವಣಗೆರೆ ಅಭ್ಯರ್ಥಿ ವಿರುದ್ಧ ವ್ಯಕ್ತವಾಗುತ್ತಿರುವ ಅಸಮಾಧಾನ ಶಮನಕ್ಕೆ ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಮಧ್ಯಪ್ರವೇಶ ಮಾಡಿದ್ದು, ಜಿಲ್ಲಾ ನಾಯಕರ ಮನವೊಲಿಕೆ ಕಾರ್ಯ ಆರಂಭಿಸಿದ್ದಾರೆ. ರೆಬೆಲ್ ನಾಯಕರು ಇಂದಿನ ಸಭೆಗೆ ಗೈರಾದ ಹಿನ್ನೆಲೆಯಲ್ಲಿ ನಾಳೆ ದಾವಣಗೆರೆಗೆ ತೆರಳಿ ಸಮಸ್ಯೆ ಪರಿಹರಿಸಲು ಬಿಎಸ್ವೈ ಮುಂದಾಗಿದ್ದಾರೆ.
ದಾವಣಗೆರೆ ಬಂಡಾಯ ನಾಯಕರ ಜತೆ ಯಡಿಯೂರಪ್ಪ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲೇ ಇಂದು ಮನವೊಲಿಕೆ ಕಸರತ್ತು ನಡೆಸಿದರು. ಸಂಸದ ಜಿ ಎಂ ಸಿದ್ದೇಶ್ವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ದಾವಣಗೆರೆ ಮುಖಂಡರು ಭಾಗಿಯಾಗಿದ್ದರು. ಈ ಸಭೆಗೆ ಬಿಎಸ್ವೈ ಮಾನಸಪುತ್ರ ಎಂದೇ ಕರೆಸಿಕೊಳ್ಳುವ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹಾಗೂ ಎಸ್ ಎ ರವೀಂದ್ರನಾಥ್ ಗೈರಾದರೆ, ಮಾಜಿ ಶಾಸಕರಾದ ಜಗಳೂರು ರಾಮಚಂದ್ರಪ್ಪ, ಪ್ರೊ.ಲಿಂಗಣ್ಣ ಭಾಗಿಯಾಗಿದ್ದರು. ಮನಸ್ತಾಪ ಮರೆತು ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ನಾಯಕರಿಗೆ ಯಡಿಯೂರಪ್ಪ ತಿಳಿಸಿದರು. ಬಳಿಕ ಪ್ರಮುಖ ಇಬ್ಬರು ನಾಯಕರ ಮನವೊಲಿಕೆ ಮಾಡಲು ದಾವಣಗೆರೆಗೆ ತೆರಳುವುದಾಗಿ ಹೇಳಿದರು.
ಸಭೆ ನಂತರ ಮಾತನಾಡಿದ ಯಡಿಯೂರಪ್ಪ, ಇವತ್ತು ದಾವಣಗೆರೆ ನಾಯಕರು ಬಂದಿದ್ದರು, ಅವರ ಜೊತೆ ಮಾತುಕತೆ ನಡೆಸಿದ್ದೇವೆ, ದಾವಣಗೆರೆಗೆ ನಾಳೆ ನಾನು ಹೋಗ್ತಿದ್ದೇನೆ, ಎಲ್ಲವೂ ಸರಿಹೋಗಲಿದೆ, ಹೋಗಿ ಮಾತಾಡಿಕೊಂಡು ಬರುತ್ತೇನೆ, ಎಲ್ಲೂ ಸಮಸ್ಯೆ ಇಲ್ಲ, ಎಲ್ಲವೂ ಸರಿಹೋಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇವತ್ತು ಚಿತ್ರದುರ್ಗ ಟಿಕೆಟ್ ಘೋಷಣೆ ಆಗುತ್ತೆ:ಚಿತ್ರದುರ್ಗ ಟಿಕೆಟ್ ಘೋಷಣೆ ಇವತ್ತು ಆಗಲಿದೆ, ಎಲ್ಲ 28 ಕ್ಷೇತ್ರ ಗೆಲ್ಲಲು ಶಕ್ತಿ ಮೀರಿ ಪ್ರಯತ್ನ ಮಾಡ್ತೇವೆ, ಅದರಲ್ಲಿ ಯಶಸ್ವಿ ಆಗುತ್ತೇವೆ ಎನ್ನುವ ವಿಶ್ವಾಸ ಇದೆ. ಜನಾರ್ದನ ರೆಡ್ಡಿಯವರು ಪಕ್ಷಕ್ಕೆ ಬಂದಿದ್ದು ಶಕ್ತಿ ಬಂದಂತಾಗಿದೆ, ಆ ಭಾಗದಲ್ಲಿ ರೆಡ್ಡಿಯವರು ಜನಪ್ರಿಯ ನಾಯಕರು, ದೆಹಲಿಯಲ್ಲಿ ಅವರನ್ನು ಕರೆದು ಮಾತನಾಡಲಾಗಿದೆ, ಅವರು ಪಕ್ಷಕ್ಕೆ ಬಂದಿದ್ದಾರೆ, ನಮಗೆ ದೊಡ್ಡ ಶಕ್ತಿ ಬಂದಿದೆ. ಶ್ರೀರಾಮುಲು, ಜನಾರ್ದನ ರೆಡ್ಡಿ ಒಟ್ಟಾಗಿ ಹೋಗ್ತಾರೆ, ಈಗಾಗಲೇ ಇಬ್ಬರ ಜೊತೆಗೂ ಮಾತನಾಡಿದ್ದೇವೆ, ನಾವೆಲ್ಲರೂ ಒಟ್ಟಾಗಿ ಹೋಗುತ್ತೇವೆ, ಒಟ್ಟಿಗೆ ಪ್ರವಾಸ ಮಾಡುತ್ತೇವೆ ಎಂದರು.