ಕರ್ನಾಟಕ

karnataka

ETV Bharat / state

ಜ.27ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ: ಪಿ.ರಾಜೀವ್ - ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯು ಇದೇ 27 ರಂದು ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಮಾಹಿತಿ ನೀಡಿದ್ದಾರೆ.

P rajeev
ಪಿ ರಾಜೀವ್

By ETV Bharat Karnataka Team

Published : Jan 23, 2024, 5:11 PM IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದ ಕಾರಣದಿಂದಾಗಿ ಮುಂದೂಡಿಕೆಯಾಗಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯು ಇದೇ 27ರಂದು ಅರಮನೆ ಮೈದಾನದಲ್ಲಿ (ಗೇಟ್ ನಂಬರ್ 4) ನಡೆಯಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ತಿಳಿಸಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾರ್ಯಕಾರಿಣಿ ಅಧ್ಯಕ್ಷತೆ ವಹಿಸಲಿದ್ದು, ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರು ಆಗಮಿಸಲಿದ್ದಾರೆ. ಅಂದು ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ಸಭೆ ಇರಲಿದೆ ಎಂದರು.

ಕಲಬುರಗಿ ಜಿಲ್ಲೆಯ ಗ್ರಾಮವೊಂದರಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್​ ಅಂಬೇಡ್ಕರರ ಪುತ್ಥಳಿಗೆ ಕಿಡಿಗೇಡಿಗಳು ಅವಮಾನ ಮಾಡಿದ್ದಾರೆ. ಬಿಜೆಪಿ ಇದನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎಂಬುದಕ್ಕೆ ಇದು ಉದಾಹರಣೆ. ಯಾವುದೇ ರೀತಿಯ ರಕ್ಷಣೆ ಕೊಡುವ ಕೆಲಸವನ್ನು ಈ ಸರ್ಕಾರ ಮಾಡಿಲ್ಲ ಎಂದು ಟೀಕಿಸಿದರು.

ಅಂಬೇಡ್ಕರರ ಪುತ್ಥಳಿಗೆ ಅವಮಾನ ಮಾಡಿದರೆ ಅದು ದಲಿತ ಸಮುದಾಯಕ್ಕೆ ಅವಮಾನ ಮಾಡಿದಂತೆ. ಈ ಸರ್ಕಾರದಲ್ಲಿ ದಲಿತರಿಗೂ ಅವಮಾನ ಆಗುತ್ತಿದೆ. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಸರ್ಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಆಕ್ಷೇಪಿಸಿದರು. ಕಿಡಿಗೇಡಿಗಳು ಯಾರೇ ಇದ್ದರೂ ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.

ಕರ್ನಾಟಕದಲ್ಲಿರುವ ಎಲ್ಲ ಮಹಾನುಭಾವರ ಪ್ರತಿಮೆಗಳಿಗೆ ಅವಮಾನ ಆಗದಂತೆ ಮುನ್ನೆಚ್ಚರಿಕೆಯನ್ನು ಈ ಸರ್ಕಾರ ತೆಗೆದುಕೊಳ್ಳಬೇಕು. ಪ್ರತಿಮೆಗಳಿಗೆ ಅವಮಾನ ಮಾಡುವುದು, ಶ್ರೀರಾಮಚಂದ್ರನ ಭಾವಚಿತ್ರ ಹರಿದು ಹಾಕುವುದು ಹೆಚ್ಚಾಗುತ್ತಿದೆ. ಕಾಂಗ್ರೆಸ್ಸಿನ ಮನಸ್ಥಿತಿ ಯಾವ ಕಡೆ ಹೋಗುತ್ತಿದೆ ಎಂಬುದು ಇದರಿಂದ ಗೊತ್ತಾಗುತ್ತದೆ. ಗೃಹ ಸಚಿವರು ಈ ಸಂಬಂಧ ಸ್ಪಷ್ಟೀಕರಣ ಕೊಡಬೇಕು ಎಂದು ಆಗ್ರಹಿಸಿದರು. ಗೃಹ ಸಚಿವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ಸೋತು ಹೋಗಿದ್ದಾರೆ ಎಂದು ಅವರು ಇದೇ ವೇಳೆ ಟೀಕಿಸಿದರು.

ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ‌ಮಾತನಾಡಿ, ಬಾಬಾ‌ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಲಾಗಿದೆ. ಧ್ವನಿ‌ ಇಲ್ಲದ ಜನರಿಗೆ‌ ಧ್ವನಿ ಆದವರು ಅಂಬೇಡ್ಕರ್, ಇದನ್ನ ಯಾರೇ ಮಾಡಿದ್ದರೂ ಅಕ್ಷಮ್ಯ ಅಪರಾಧ. ಸರ್ಕಾರ ಇದನ್ನ ಹೇಗೆ ಸ್ವೀಕರಿಸುತ್ತದೆ? ತಳ ಸಮುದಾಯಗಳಿಗೆ ರಕ್ಷಣೆ ಇಲ್ಲ. ಈ ಸರ್ಕಾರ ಎಷ್ಟರ ಮಟ್ಟಿಗೆ ಕಿಡಿಗೇಡಿಗಳಿಗೆ‌ ಭಯ ಇಟ್ಟಿದೆ ಎನ್ನುವುದು ಘಟನೆಯಿಂದ ಗೊತ್ತಾಗುತ್ತಿದೆ. ಹಾಗಾಗಿ ಈಗ ನೀಡುವ ಶಿಕ್ಷೆ ಬೇರೆ ಯಾವುದೇ ಪುತ್ಥಳಿಗಳಿಗೆ ಇಂತಹ ಕೆಟ್ಟ ಕೆಲಸ‌ ಮಾಡದಂತೆ ಎಚ್ಚರಿಕೆಯಾಗಿರಬೇಕು ಎಂದು ಆಗ್ರಹಿಸಿದರು.

ಸಚಿವ ಪ್ರಿಯಾಂಕ್ ಖರ್ಗೆ ಏನು ಮಾಡುತ್ತಿದ್ದಾರೆ. ಅವರು ಕೂಡ ‌ಇದೇ‌ ಜಿಲ್ಲೆಯವರು, ಘಟನೆ ಹಿಂದೆ ಇರುವವರನ್ನ ಬಂಧಿಸಬೇಕು. ಅರೆಸ್ಟ್ ಮಾಡದೇ ಹೋದರೆ ಎಸ್​​ಸಿ ಮೋರ್ಚಾದಿಂದ ಕಲಬುರಗಿಗೆ ಬರಬೇಕಾಗುತ್ತದೆ ಎಂದು ಛಲವಾದಿ ನಾರಾಯಣಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ‌ ನೀಡಿದ‌ರು.

ಇದನ್ನೂ ಓದಿ:ರಾಹುಲ್​ ಗಾಂಧಿ ನ್ಯಾಯ ಯಾತ್ರೆಗೆ ಅಡ್ಡಿ ಖಂಡಿಸಿ ಕಾಂಗ್ರೆಸ್ ನಾಯಕರಿಂದ ಪ್ರತಿಭಟನೆ

ABOUT THE AUTHOR

...view details